

ಬೆಳ್ತಂಗಡಿ (ದ.ಕ): ಶ್ರೀಕ್ಷೇತ್ರ ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡಿದ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್‌ಗೆ ಮೂರು ತಿಂಗಳುಗಳ ಸಜೆಯನ್ನು ಪುನರುಚ್ಚರಿಸಿ ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದೆ.
ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಶ್ರೀಕ್ಷೇತ್ರ ಧರ್ಮಸ್ಥಳದಿಂದ ದಾಖಲಿಸಲ್ಪಟ್ಟಿದ್ದ ಮೂಲ ದಾವೆ ನಂಬ್ರ 226/2013ರಲ್ಲಿ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಹಾಗೂ ಇತರರ ವಿರುದ್ಧ ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಹೆಗ್ಗಡೆಯವರ ಕುಟುಂಬ ಹಾಗೂ ಸಂಸ್ಥೆಗಳ ಕುರಿತು ಗೌರವಕ್ಕೆ ಹಾನಿಯಾಗುವ ಯಾವುದೇ ಹೇಳಿಕೆ, ಸುದ್ದಿ ಅಥವಾ ಆರೋಪ ಮಾಡಬಾರದೆಂದು ಪ್ರತಿಬಂಧಕಾಜ್ಞೆ ಜಾರಿಗೊಳಿಸಿತ್ತು. ಈ ಆದೇಶವನ್ನು ಕೆ.ಸೋಮನಾಥ ನಾಯಕ್ ಉಲ್ಲಂಘಿಸಿ ಶ್ರೀಕ್ಷೇತ್ರ ಹಾಗೂ ಹೆಗ್ಗಡೆಯವರ ವಿರುದ್ಧ ಆರೋಪ ಮಾಡುತ್ತಲೇ ಇದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಜರುಗಿಸಬೇಕೆಂದು ಬಿ.ವರ್ಧಮಾನ್ ಶ್ರೀಕ್ಷೇತ್ರದ ಪರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ವಾದ ಆಲಿಸಿದ ನ್ಯಾಯಾಲಯ ಈ ಹಿಂದೆ ಎರಡು ಬಾರಿ ಕೆ.ಸೋಮನಾಥ್ ನಾಯಕ್‌ಗೆ ಜೈಲು ಶಿಕ್ಷೆ ವಿಧಿಸಿತ್ತು. ಈ ಆದೇಶಗಳ ವಿರುದ್ಧ ಕೆ.ಸೋಮನಾಥ ನಾಯಕ್ ಸಲ್ಲಿಸಿದ್ದ ಮೇಲ್ಮನವಿಯಲ್ಲಿ ಪ್ರಕರಣ ಹೆಚ್ಚುವರಿ ತನಿಖೆಗೆ ಮೂಲ ನ್ಯಾಯಾಲಯಕ್ಕೆ ಮರು ರವಾನಿಸಲ್ಪಟ್ಟಿತ್ತು. ಮೇಲ್ಮನವಿಯಲ್ಲಾದ ಆದೇಶ ಪ್ರಕಾರ ಕೆ.ಸೋಮನಾಥ ನಾಯಕ್ ಕಡೆಯಿಂದ ಹೆಚ್ಚುವರಿ ಸಾಕ್ಷಿಯ ತನಿಖೆಯೂ ನಡೆದು ಎರಡೂ ಪಕ್ಷದ ವಾದವನ್ನು ಆಲಿಸಿದ ನಂತರ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸತೀಶ್ ಕೆ.ಜಿ ಜೂ.8ರಂದು ಈ ಹಿಂದಿನ ತೀರ್ಪನ್ನೇ ಪುನರುಚ್ಚರಿಸಿ ಆದೇಶ ಹೊರಡಿಸಿದ್ದಾರೆ.
ಕೆ.ಸೋಮನಾಥ ನಾಯಕ್ ಸಮಾಜ ಸುಧಾರಕನೆಂಬ ಸೋಗಿನಲ್ಲಿ ಎಲ್ಲೆ ಮೀರಿ ವರ್ತಿಸಿ ಶ್ರೀಕ್ಷೇತ್ರ, ಹೆಗ್ಗಡೆಯವರು ಹಾಗೂ ಅವರ ಕುಟುಂಬವನ್ನು ಗುರಿಯಾಗಿಸಿಕೊಂಡು ಅಪಪ್ರಚಾರ ಮಾಡಿ ನ್ಯಾಯಾಲಯದ ಆದೇಶ ಉಲ್ಲಂಘಿಸಿರುವುದು ಸ್ಪಷ್ಟವಾಗಿರುವುದಾಗಿ ನ್ಯಾಯಾಲಯ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ. ಶ್ರೀ ಕ್ಷೇತ್ರದ ಪರವಾಗಿ ಬೆಳ್ತಂಗಡಿಯ ವಕೀಲರಾದ ರತ್ನವರ್ಮ ಬುಣ್ಣು ಹಾಗೂ ಎಂ.ಬದರಿನಾಥ ಸಂಪಿಗೆತ್ತಾಯ ವಾದಿಸಿದ್ದರು.
4.5 ಲಕ್ಷ ರೂ.ಪರಿಹಾರಕ್ಕೆ ಆದೇಶ: ಕೆ.ಸೋಮನಾಥ ನಾಯಕ್ ಮಾಡಿರುವ ಅಪರಾಧಕ್ಕೆ ಶಿಕ್ಷೆ ನೀಡದಿದ್ದಲ್ಲಿ ಜನರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ. 3 ತಿಂಗಳ ಸೆರೆಮನೆ ವಾಸವಲ್ಲದೆ ಅವರ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿ ಶ್ರೀ ಕ್ಷೇತ್ರಕ್ಕೆ 4.5 ಲಕ್ಷ ರೂ.ವನ್ನು ಪರಿಹಾರ ರೂಪದಲ್ಲಿ ನೀಡಬೇಕೆಂದು ಆದೇಶಿಸಿದೆ.
ಈ ಪ್ರಕರಣದಲ್ಲಿ ತನ್ನನ್ನು ಸಂರಕ್ಷಿಸಿಕೊಳ್ಳಲು ಆಧಾರ ಯಾ ವಾಸ್ತವಾಂಶಗಳು ಇಲ್ಲವೆಂದು ಗೊತ್ತಿದ್ದರೂ, ನ್ಯಾಯಾಲಯದ ಅವಧಿಯನ್ನು ದುರುಪಯೋಗಪಡಿಸಿ ಮತ್ತೊಮ್ಮೆ ಶ್ರೀ ಕ್ಷೇತ್ರಕ್ಕೆ ಉಪಟಳ ನೀಡಿದ ಕಾರಣಕ್ಕೆ ನ್ಯಾಯಾಲಯ ಹೆಚ್ಚುವರಿ ಪರಿಹಾರಾರ್ಥ 2,000 ರೂ.ನೀಡುವಂತೆ ಆದೇಶಿಸಿದೆ. ಈ ಆದೇಶ ಜಾರಿಗೆ ಬರಲು ಒಂದು ತಿಂಗಳ ಅವಕಾಶವನ್ನು ನ್ಯಾಯಾಲಯ ನೀಡಿದೆ.