ಮೈಸೂರಿನಲ್ಲಿ ಒಂದೇ ದಿನ ಮೂರು ಮ್ಯಾರಥಾನ್

marathon1
Published on

ಮೈಸೂರು: ಭಾನುವಾರ ನಗರದಲ್ಲಿ ಪ್ರತ್ಯೇಕವಾಗಿ ಆಯೋಜಿಸಿದ್ದ ಮೂರು ಮ್ಯಾರಥಾನ್‌ಗೆ ಸಾಂಸ್ಕೃತಿಕ ನಗರಿ ಸಾಕ್ಷಿಯಾಯಿತು.


ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಮಾದಕ ವ್ಯಸನ ಮುಕ್ತ ವಾತಾವರಣ ನಿರ್ಮಾಣ ಮಾಡಲು ಮೈಸೂರು ನಗರ ಪೊಲೀಸ್ ವತಿಯಿಂದ ಓಟದ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.


ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ 10 ಕಿ.ಮೀ, 5 ಕಿ.ಮೀ. ಓಟ ಜರುಗಿತು. ಇದರಲ್ಲಿ ಸಾರ್ವಜನಿಕರು, ಹವ್ಯಾಸಿ ಓಟಗಾರರು, ಪೊಲೀಸರು ಪಾಲ್ಗೊಂಡಿದ್ದರು. ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಡಿಸಿಪಿಗಳಾದ ಎಂ. ಮುತ್ತುರಾಜ್, ಎಸ್.ಜಾಹ್ನವಿ ಇತರರು ಇದ್ದರು.


ಇದೇ ಉದ್ದೇಶಕ್ಕಾಗಿ ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದಲೂ ಮ್ಯಾರಥಾನ್ ನಡೆಯಿತು. ಮೈಸೂರು-ಬನ್ನೂರು ಮುಖ್ಯರಸ್ತೆಯ ಜಲಮಹಲ್ ಹತ್ತಿರ ಇರುವ ಐಜೆ ಕಲ್ಯಾಣಮಂಟಪದಿಂದ ಪ್ರಾರಂಭವಾದ ಸ್ಪರ್ಧೆ ಮೆಲ್ಲಹಳ್ಳಿ ಎಟಿಎಂಇ ಕಾಲೇಜಿನಲ್ಲಿ ಮುಕ್ತಾಯವಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಎಎಸ್‌ಪಿ ನಂದಿನಿ ಇತರರು ಇದ್ದರು.


ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಭಾರತ್ ಆಸ್ಪತ್ರೆ ಮತ್ತು ಅಂಕೋಲಾಜಿ ಸಂಸ್ಥೆ ನೆಕ್ಸಸ್ ಸೆಂಟರ್ ಸಿಟಿ, ಜೀವಧಾರ ಸಹಯೋಗದೊಂದಿಗೆ ಭಾನುವಾರ 5 ಕಿ.ಮೀ. ಮ್ಯಾರಥಾನ್ ಆಯೋಜಿಸಲಾಗಿತ್ತು.


ಮ್ಯಾರಥಾನ್‌ಗೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್.ಜಾಹ್ನವಿ, ಭಾರತ್ ಆಸ್ಪತ್ರೆ ಅಂಕೋಲಾಜಿ ಸಂಸ್ಥೆಯ ಅಧ್ಯಕ್ಷ ಡಾ.ಬಿ.ಎಸ್.ಅಜಯ್‌ಕುಮಾರ್ ಚಾಲನೆ ನೀಡಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಅಂದಾಜು 700 ಜನರು ಭಾಗವಹಿಸಿದ್ದರು.


ವೈದ್ಯಕೀಯ ಅಧೀಕ್ಷಕಿ ಡಾ.ವೈ.ಎಸ್.ಮಾಧವಿ, ಭಾರತ್ ಆಸ್ಪತ್ರೆ ಹಿರಿಯ ವೈದ್ಯಕೀಯ ಅಂಕೋಲಾಜಿಸ್ಟ್ ಡಾ.ಕೆ.ಜಿ. ಶ್ರೀನಿವಾಸ್, ಡಾ.ವಿಜಯ್ ಕುಮಾರ್, ಡಾ. ವಿನಯಕುಮಾರ್ ಮುತ್ತಗಿ, ಡಾ.ಬಿ.ಕವಿತಾ, ಆಸ್ಪತ್ರೆ ಸಿಇಒ ಗೌತಮ್ ಧಮರ್ಲಾ, ನೆಕ್ಸಸ್ ಸೆಂಟರ್ ಸಿಟಿಯ ಕೇಂದ್ರ ಮುಖ್ಯಸ್ಥ ಶ್ರೀಕುಮಾರ್, ನೆಕ್ಸಸ್ ಸೆಂಟರ್ ಸಿಟಿಯ ಮೋಹನ್ ಕುಮಾರ್, ಮಾರ್ಕೆಟಿಂಗ್ ಮುಖ್ಯಸ್ಥ ಆರ್.ಪಿ. ಆನಂದ್, ಮನು ಇದ್ದರು.


ವಿಜೇತ: ಮಹಿಳಾ ವಿಭಾಗದಲ್ಲಿ ಜಿ.ಹರ್ಷಿತಾಶ್ರೀ, ಆರ್.ನಮ್ರತಾ(ದ್ವಿ), ಟ್ಸೆರಿಂಗ್ ಡಿಕ್ಕೆ (ತೃ) ಮತ್ತು ಪುರುಷ ವಿಭಾಗದಲ್ಲಿ ರಘುವರನ್ (ಪ್ರ), ಮಣಿಕಂಠ (ದ್ವಿ), ಬಿ.ಮಹದೇವಸ್ವಾಮಿ (ತೃ) ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net