ಕ್ಯಾಂಟರ್ ವಾಹನ ಪಲ್ಟಿಯಾಗಿ ಹಿರೇನರ್ತಿಯ ಮೂವರು ಸಾವು

06 MDG- CRIME
Published on

ಮುಂಡರಗಿ: ಅತೀ ವೇಗವಾಗಿ ಸಾಗುತ್ತಿದ್ದ ಕ್ಯಾಂಟರ್ ವಾಹನ ನಿಯಂತ್ರಣವನ್ನು ತಪ್ಪಿ ಪಲ್ಟಿಯಾಗಿ ರಸ್ತೆ ಬದಿಯ ಗುಂಡಿಗೆ ಬಿದ್ದ ಪರಿಣಾಮ ಮೂವರು ಯುವಕರು ಸಾವನ್ನಪ್ಪಿದರೆ, ಇನ್ನೂ ಮೂವರು ಗಾಯಗೊಂಡ ಘಟನೆ ತಾಲೂಕಿನ ಹಳ್ಳಿಗುಡಿ ಗ್ರಾಮದ ಸಮೀಪದಲ್ಲಿ ಬುಧವಾರ ಸಂಭವಿಸಿದೆ.
ನವೀನ ಕುಂಬಾರ (23) ಸ್ಥಳದಲ್ಲಿ ಮೃತಪಟ್ಟ ಯುವಕ. ನಾಗಪ್ಪ ಕಾಳಿ (24) ಹಾಗೂ ಗಂಗಾಧರ ಅಕ್ಕಿ (21) ಚಿಕಿತ್ಸೆ ಫಲಕಾರಿಯಾಗದೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮದವರಾಗಿದ್ದಾರೆ. ಕುಂದಗೋಳದಿಂದ ಕೊಪ್ಪಳ ಜಿಲ್ಲೆಯ ಕನಕಗಿರಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಕ್ಯಾಂಟರ್ ವಾಹನ ಚಾಲಕ ಮುಸ್ತಾಕಮಹ್ಮದ್ ನಾಯ್ಕರ್ ಪರಾರಿಯಾಗಿದ್ದಾನೆ. ಮೃತರು ಹಾಗೂ ಗಾಯಾಳುಗಳು ಹಿರೇನರ್ತಿಯ ಶಾಮಿಯಾನ್ ಗುತ್ತಿಗೆ ಪಡೆಯುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ವಾರ ಕನಕಗಿರಿಯಲ್ಲಿ ನಡೆದ ಉತ್ಸವಕ್ಕೆ ಹಾಕಲಾಗಿದ್ದ ಪೆಂಡಾಲ್ ಅನ್ನು ತೆಗೆಯಲು ಹೊರಟಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net