

ಮಂಡ್ಯ: ತಾಲೂಕಿನ ತಿಬ್ಬನಹಳ್ಳಿ ಸಮೀಪ ಸೋಮವಾರ ಮಧ್ಯಾಹ್ನ ಚಾಲಕನ ನಿಯಂತ್ರಣ ತಪ್ಪಿದ ಕಾರು ವಿಶ್ವೇಶ್ವರಯ್ಯ ನಾಲೆಗೆ ಉರುಳಿಬಿದ್ದ ಪರಿಣಾಮ ಮೂವರು ಸಾವನ್ನಪ್ಪಿ, ಒರ್ವ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ನಗರದ ಹಾಲಹಳ್ಳಿ ಬಡಾವಣೆಯ ಅಸ್ಲಂಪಾಷ (55), ಕಾರು ಚಾಲಕ ಫಯಾಜ್(58) ಮೃತದೇಹ ಪತ್ತೆಯಾಗಿದೆ. ನೀರಿನಲ್ಲಿ ನಾಪತ್ತೆಯಾಗಿರುವ ಪೀರ್‌ಖಾನ್(45) ಎಂಬಾತನಿಗಾಗಿ ಹುಡುಕಾಟ ನಡೆಸಲಾಗಿದೆ. ಅಂತೆಯೇ ನಯಾಜ್ ಎಂಬಾತ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ಏನಿದು ದುರಂತ?: ನಾಲ್ವರು ಹುಲಿಕೆರೆ ಕಡೆಯಿಂದ ಕಾರಿನಲ್ಲಿ ಮಾಚಹಳ್ಳಿ ಮಾರ್ಗವಾಗಿ ಶಿವಳ್ಳಿಗೆ ಬರುತ್ತಿದ್ದ ವೇಳೆ ರಸ್ತೆ ಎಡ ಬದಿಯಲ್ಲಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಇರುವ ಕಂಬಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ಚಾಲಕ ಬಲಕ್ಕೆ ತಿರುಗಿಸಿದಾಗ ಆಯತಪ್ಪಿ ವಿಶ್ವೇಶ್ವರಯ್ಯ ನಾಲೆಗೆ ಉರುಳಿಬಿದ್ದಿದೆ. ಇದರಿಂದ ದೊಡ್ಡ ಸದ್ದು ಕೇಳಿಬಂದ ಕಾರಣ ಸುತ್ತಮುತ್ತ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಸ್ಥಳಕ್ಕೆ ಬಂದಿದ್ದಾರೆ. ಮಾಚಹಳ್ಳಿ ರಾಜು ಮತ್ತು ಇತರರು ನಯಾಜ್‌ನನ್ನು ರಕ್ಷಿಸಿ ತಕ್ಷಣ ಆ್ಯಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನಿಸಿದರು.
ಮತ್ತೊಬ್ಬರನ್ನು ಮೇಲೆತ್ತುವ ಪ್ರಯತ್ನ ಮಾಡಿದರಾದರೂ, ಸಾಧ್ಯವಾಗಲಿಲ್ಲ. ಉಳಿದ ಇಬ್ಬರು ನೀರಿನಲ್ಲಿ ತೇಲಿಕೊಂಡು ಹೋಗಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದ ತಂಡ ಸತತ ಪ್ರಯತ್ನ ನಡೆಸಿ ಕಾರನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು. ಮಧ್ಯಾಹ್ನ ಒರ್ವ ಮತ್ತು ಸಂಜೆ ವೇಳೆ ಮತ್ತೊಬ್ಬನ ಶವ ಪತ್ತೆಯಾಗಿದೆ. ಬೋಟ್ ಪಂಚ್ಚರ್ ಆದ ಪರಿಣಾಮ ಕಾರ್ಯಾಚರಣೆಗೆ ಸಮಸ್ಯೆಯಾಯಿತು. ಮತ್ತೊಂದು ಬೋಟ್ ತರಿಸಿ ಶೋಧ ಕೆಲಸ ನಡೆಸಲಾಯಿತು. ಮಾತ್ರವಲ್ಲದೆ ನುರಿತ ಈಜುಗಾರರನ್ನು ಬಳಸಿಕೊಳ್ಳಲಾಯಿತು. ಘಟನೆ ಸಂಬಂಧ ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.