ಸರಣಿ ಅಪಘಾತದಲ್ಲಿ ಮೂವರಿಗೆ ಗಾಯ

gurugunta Accident
ಅಪಘಾತದಿಂದ ಎನ್‌ಎಚ್ 150ಎನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
Published on

ಗುರುಗುಂಟಾ: ಹಳೇ ಗೋಲಪಲ್ಲಿ ಬಳಿ ಜೇವರ್ಗಿ-ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿ 150 (ಎ )ಯಲ್ಲಿ ಭಾನುವಾರ ನಸುಕಿನ ಜಾವ ಸರಣಿ ಅಪಘಾತ ಸಂಭವಿಸಿದ್ದು, ಮೂರು ಲಾರಿ, ಪಿಕಪ್ ವಾಹನ, ಬೈಕ್ ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಎರಡು ಲಾರಿ, ಪಿಕಪ್ ವಾಹನ ಚಾಲಕರಾದ ಹುಸೇನ್ ಸಾಬ್, ಅಮರೇಶ, ಪರಮೇಶಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಲಿಂಗಸುಗೂರು ಸರ್ಕಾರಿ ಆಸ್ಪತ್ರಗೆ ದಾಖಲಿಸಲಾಗಿದೆ. ಶುಕ್ರವಾರ ಸಂಜೆ ಸಿಮೆಂಟ್ ಟ್ಯಾಂಕರ್ ಲಾರಿ ಪಲ್ಟಿಯಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಆದರೆ, ತೆರವುಗೊಳಿಸಿಲ್ಲ.

ಭಾನುವಾರ ನಸುಕಿನಲ್ಲಿ ಕಲಬುರಗಿ ಕಡೆ ತೆರಳುತ್ತಿದ್ದ ಲಾರಿ ಡಿಕ್ಕಿ ಹೊಡೆದಿದ್ದು, ಇದಕ್ಕೆ ಹಿಂದೆ ಬರುತ್ತಿದ್ದ ಲಾರಿ, ಅದಕ್ಕೆ ಕುರಿಗಳು ತುಂಬಿದ್ದ ಪಿಕಪ್ ವಾಹನ ಅಪ್ಪಳಿಸಿದೆ. ಇದೇ ವೇಳೆ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ಲಾರಿ ಚಕ್ರದ ಕೆಳಗೆ ಸಿಲುಕಿ ನಜ್ಜುಗುಜ್ಜಾಗಿದೆ.

ಸರಣಿ ಅಪಘಾತಕ್ಕೆ ರಸ್ತೆಗೆ ಅಡ್ಡಲಾಗಿ ಬಿದ್ದ ಟ್ಯಾಂಕರ್ ವಾಹನ ತೆರವುಗೊಳಿಸದಿರುವುದೇ ಕಾರಣ ಎನ್ನಲಾಗಿದೆ. ರಸ್ತೆ ಅಪಘಾತದಿಂದ ಮೂರು ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿ ಪ್ರಯಾಣಿಕರು, ವಾಹನ ಸವಾರರು ಪರದಾಡಿದರು.

ಕೆಲ ಬಸ್, ವಾಹನಗಳು ಗೌಡೂರು, ಯಲಗಟ್ಟಾ, ಜಾಲಹಳ್ಳಿ, ತಿಂಥಣಿ ಬ್ರಿಡ್ಜ್ ಮಾರ್ಗವಾಗಿ ತೆರಳಿದವು. ಸ್ಥಳಕ್ಕೆ ಹಟ್ಟಿಚಿನ್ನದಗಣಿ ಠಾಣೆ ಪಿಎಸ್‌ಐ ಧರ್ಮಣ್ಣ, ಎಎಸ್‌ಐ ರೆಹಮಾನ್ ಭೇಟಿ ನೀಡಿ ಪರಿಶೀಲಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net