

ಲಕ್ಷ್ಮೇಶ್ವರ: ಪಟ್ಟಣದ ಭಾನು ಮಾರ್ಕೆಟ್ ಹತ್ತಿರ ಮಂಗಳವಾರ ರಾತ್ರಿ ಮನೆಯ ಮಾಳಿಗೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಮೂವರು ವೃದ್ಧರು ಹಾಗೂ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಳೆಯದಾದ ಜಂತಿ ಮನೆ ಮಳೆಗೆ ಸೋರುವುದನ್ನು ತಪ್ಪಿಸಲು ಪ್ಲಾಸ್ಟಿಕ್ ಹೊದಿಕೆ ಹಾಕಲಾಗಿತ್ತು. ಒಂದು ವಾರದ ಜಿನುಗು ಮಳೆಗೆ ಮೊದಲೇ ಸೋರುತ್ತಿದ್ದ ಮನೆಯ ಮಾಳಿಗೆ ಜಂತಿ ಸಮೇತ ಕುಸಿದಿದೆ.
ಮಲಗಿದ್ದ ಗಂಗಪ್ಪ ಸಿದ್ರಾಮಪ್ಪ ಹತ್ತಿಕಾಳ, ಸರೋಜಾ ಗಂಗಪ್ಪ ಹತ್ತಿಕಾಳ ಮತ್ತು ಚಂಬವ್ವ ಮಹಾಂತಶೆಟ್ಟರ ಮಣ್ಣಿನಡಿ ಸಿಲುಕಿ ಒದ್ದಾಡಿ ಕಿರುಚಾಡುತ್ತಿದ್ದಾಗ ನೆರೆಹೊರೆಯವರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಲಕ್ಷ್ಮೇಶ್ವರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ತಹಸೀಲ್ದಾರ್ ವಾಸುದೇವ ಸ್ವಾಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ತೀವ್ರವಾಗಿ ಗಾಯಗೊಂಡ ಒಬ್ಬನನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿದರು. ಮನೆ ಕಳೆದುಕೊಂಡು ನಿರ್ಗತಿಕರಾದ ಕುಟುಂಬಕ್ಕೆ ತಾತ್ಕಾಲಿಕ ವಸತಿ ಕಲ್ಪಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು. ಅಲ್ಲದೆ, ಮನೆ ನಿರ್ಮಾಣಕ್ಕೆ ಪರಿಹಾರ ಕಲ್ಪಿಸುವುದಾಗಿ ಹೇಳಿದರು.
ಕಂದಾಯ ನಿರೀಕ್ಷಕ ಬಿ.ಎಂ. ಕಾತರಾಳ, ಗ್ರಾಮ ಲೆಕ್ಕಾಧಿಕಾರಿ ಡಿ.ಎಸ್. ಕುಲಕರ್ಣಿ, ಬಸವರಜ ಮೆಣಸಿನಕಾಯಿ ಇತರರಿದ್ದರು.