ಪತಿ ಸೇರಿ ಮೂವರಿಗೆ ಕಾರಾಗೃಹ ಶಿಕ್ಷೆ

Published on

ಮೈಸೂರು: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಗೃಹಿಣಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ಪತಿ ಸೇರಿದಂತೆ ಕುಟುಂಬದ ಮೂವರಿಗೆ ನಗರದ ಐದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪಿರಿಯಾಪಟ್ಟಣ ತಾಲೂಕಿನ ಹಿಟ್ಟನಹಳ್ಳಿ ಗ್ರಾಮದ ಎಚ್.ಆರ್.ಮಂಜು, ಅವರ ತಂದೆ ರಾಜಪ್ಪ, ತಾಯಿ ಶಿವಮ್ಮ ಶಿಕ್ಷೆಗೆ ಗುರಿಯಾದವರು.

ನಾರಳಪುರ ಗ್ರಾಮದ ಈರಪ್ಪಾಜಿ ಅವರ ಪುತ್ರಿ ಸುನೀತಾ ಅವರನ್ನು 2020 ಮಾರ್ಚ್ 16ರಂದು ಮಂಜು ಮದುವೆಯಾಗಿದ್ದ. ಹೆಚ್ಚಿನ ವರದಕ್ಷಿಣೆ ತರುವಂತೆ ಆಗಾಗ್ಗೆ ಪೀಡಿಸುತ್ತಿದ್ದರಿಂದ ಬೇಸತ್ತ ಸುನೀತಾ ಮದುವೆಯಾದ ಒಂದೇ ವರ್ಷದಲ್ಲಿ 2021ರ ಫೆಬ್ರವರಿ 14 ರಂದು ಮನೆಯಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಪೊಲೀಸರು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳವರ್ ಅವರು ಮೂವರಿಗೆ ಶಿಕ್ಷೆಯೊಂದಿಗೆ ತಲಾ 5 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಬಿ.ಈ. ಯೋಗೇಶ್ವರ ವಕಾಲತ್ತು ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net