

ಚಿಕ್ಕಬಳ್ಳಾಪುರ: ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಮನೆಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಜತೆಗೆ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ ಇಂಡಿಕಾ ಕಾರು ಸೇರಿದಂತೆ 47.69 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇತ್ತೀಚೆಗೆ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದ ಪಿ.ವಿ.ಕೃಷ್ಣಾರೆಡ್ಡಿ ಎಂಬುವರಿಗೆ ಸೇರಿದ ಮನೆಯ ಬೀಗ ಹೊಡೆದು ಸುಮಾರು ೭.೫೦ ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣಗಳನ್ನು ಕದಿಯಲಾಗಿತ್ತು. ಹಾಗೆಯೇ ಚಿಂತಾಮಣಿ ತಾಲೂಕಿನ ಕಾಗತಿ ರಾಜಪ್ಪ ಎಂಬುವರ ಮನೆಯ ಬೀಗವನ್ನು ಮುರಿದು 98,400 ರೂ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕದಿಯಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಚಿಂತಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನು ಭೇದಿಸಲು ಎಎಸ್‌ಪಿ ರಾಜಾ ಇಮಾಮ್ ಖಾಸಿಮ್ ಮತ್ತು ಚಿಂತಾಮಣಿ ಉಪ ವಿಭಾಗದ ಡಿವೈಎಸ್‌ಪಿ ಪಿ.ಮುರಳೀಧರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು.
*ಮೂವರ ಕಳ್ಳರ ಬಂಧನ*
ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೆರೆಯ ಆಂಧ್ರಪ್ರದೇಶದ ಹಿಂದೂಪುರ ಎಂ.ಮಹೇಶ್ ಅಲಿಯಾಸ್ ಉಪ್ಪಾರ ಮಹೇಶ್ ಮತ್ತು ಬೆಂಗಳೂರಿನ ಕಾಟನ್ ಪೇಟೆಯ ಜಾಲಿ ಮೊಹಲ್ಲಾ, ನಿವಾಸಿ ಮುದಾಪೀರ್ ಪಾಷ ಮತ್ತು ಚಿಂತಾಮಣಿ ತಾಲೂಕಿನ ಚಿನ್ನಸಂದ್ರದ ಎ.ಡಿ.ಸುಲ್ತಾನನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಮಾಲನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ