

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಕಾಂಗ್ರೆಸ್‌ನಲ್ಲಿ ಮೂರು ಗುಂಪುಗಳಾಗಿವೆ. ಒಬ್ಬೊಬ್ಬರದು ಒಂದೊಂದು ಗುಂಪು. ಪರಮೇಶ್ವರದ್ದು ದಲಿತರ, ಸಿದ್ದರಾಮಯ್ಯನವರದ್ದು ಹಿಂದುಳಿದವರ ಹಾಗೂ ಡಿಕೆ ಶಿವಕುಮಾರ ಅವರದ್ದು ಗೌಡರ ಗುಂಪು ಇದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಟೀಕಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೂರು ಗುಂಪುಗಳ ನಾಯಕರು ಸಭೆಗೆ ಉತ್ತರ ಕರ್ನಾಟಕ ಭಾಗದ ಹಿರಿಯ ಎಚ್.ಕೆ. ಪಾಟೀಲರನ್ನು ಕರೆದಿಲ್ಲ. ಡಿಕೆ ಶಿವಕುಮಾರ ಮುಖ್ಯಮಂತ್ರಿ ಆಗುವ ಆಸೆಯಿಂದ ಗೌಡರ ಗುಂಪು ಕಟ್ಟಿಕೊಂಡು ಮಠ, ಮಂದಿರ ಸೇರಿ ಎಲ್ಲ ಕಡೆ ಓಡಾಡುತ್ತಿದ್ದಾರೆ. ಕುಮಾರಸ್ವಾಮಿ ಅವರನ್ನೂ ಭೇಟಿ ಮಾಡಿದ್ದಾರೆ. ಇಂತಹ ಸರ್ಕಾರದಿಂದ ರಾಜ್ಯ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್‌ನಲ್ಲಿ ಲಿಂಗಾಯತರು 2ನೇ ದರ್ಜೆ ನಾಗರಿಕರಾಗಿದ್ದಾರೆ. ಅವರು ಎಂದಿಗೂ ಲಿಂಗಾಯತರಿಗೆ ಮರ್ಯಾದೆ ನೀಡಿಲ್ಲ. ಲಿಂಗಾಯತರ ಸ್ಥಿತಿ ಅಲೆಮಾರಿ ಆದಂತಾಗಿದೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲರನ್ನು ಸಹ ಸರಿಯಾಗಿ ನಡೆಸಿಕೊಂಡಿಲ್ಲ. ಸದ್ಯದ ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ ಕಾಂಗ್ರೆಸ್ ಖಜಾಂಚಿಯಾಗಿದ್ದವರು. ಇದೀಗ ಸಚಿವರು ಅವರ ಮಾತನ್ನೂ ಕೇಳುತ್ತಿಲ್ಲ ಎಂದು ಅವರೇ ಹೇಳಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರವನ್ನಿ ಬಿಜೆಪಿ ಬೀಳಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಕಾರಜೋಳ, ಆ ಪಾಪದ ಕೆಲಸವನ್ನು ನಾವು ಮಾಡುವುದಿಲ್ಲ. ಹಾಲು ಕುಡಿದು ಸಾಯುವವರೆಗೆ ವಿಷ ಹಾಕುವುದಿಲ್ಲ. ಹಾಲು ಕುಡಿದು ಸಾಯುವರಿಗೆ ವಿಷ ಹಾಕುವ ಪಾಪದ ಕೆಲಸ ನಾವು ಮಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.
-----ಬಾಕ್ಸ್---
ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ವರ್ಗಾವಣೆಯಲ್ಲಿ 5000 ಕೋಟಿ ರೂ. ಸಂಪಾದನೆ ಮಾಡಿದೆ. ಇಂತಹ ಕೆಲ ಬಿಟ್ಟು ಎಲ್ಲ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ನೀಡಿದಂತೆ (ಷರತ್ತು ಇಲ್ಲದೆ) ಯಥಾವತ್ತಾಗಿ ಜಾರಿಗೆ ತರಲಿ. ಇಲ್ಲವಾದಲ್ಲಿ ಜನರಲ್ಲಿ ಜಾಗೃತಿ ಮೂಡಿಸಿ ಬಂಡೇಳುವಂತೆ ಮಾಡುತ್ತೇವೆ ಎಂದು ಗೋವಿಂದ ಕಾರಜೋಳ ಎಚ್ಚರಿಸಿದರು.