ನಿಂತಿದ್ದ ಲಾರಿಗೆ ಪಿಕಪ್ ಡಿಕ್ಕಿಯಾಗಿ ಮೂವರು ಮೃತ್ಯು

crime
Published on

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಬಜತ್ತೂರು ಗ್ರಾಮದ ವಳಾಲು ಬೆದ್ರೋಡಿಯಲ್ಲಿ ಸೋಮವಾರ ಸಂಜೆ ಕೆಟ್ಟು ನಿಂತಿದ್ದ ಲಾರಿಯನ್ನು ದುರಸ್ತಿ ಪಡಿಸುತ್ತಿದ್ದ ಮೂವರು ಮೆಕ್ಯಾನಿಕ್‌ಗಳ ಮೇಲೆ ಪಿಕಪ್‌ವೊಂದು ಹರಿದು ಮೂವರೂ ಸಾವನ್ನಪ್ಪಿದ್ದಾರೆ.

ಬೆಂಗಳೂರು ಮೂಲದ ಮಧು(35), ಅಬ್ದುಲ್ ರೆಹಮಾನ್(25), ಅಫ್ಜಲ್ ಯಾನೆ ಅಬ್ಸಾನ್(35) ಮೃತಪಟ್ಟವರು.

ಆಸಿಫ್ ಎಂಬುವರು ಚಾಲಕರಾಗಿದ್ದ ಖಾಸಗಿ ಸಂಸ್ಥೆಗೆ ಸೇರಿದ್ದ ಲಾರಿ ಬೆದ್ರೋಡಿ ಎಂಬಲ್ಲಿ ಮೂರು ದಿನಗಳಿಂದ ಕೆಟ್ಟು ನಿಂತಿತ್ತು. ದುರಸ್ತಿ ಕಾರ್ಯಕ್ಕಾಗಿ ಸಂಸ್ಥೆಯು ಬೆಂಗಳೂರಿನಿಂದಲೇ ಮೆಕ್ಯಾನಿಕ್‌ಗಳನ್ನು ಕಳುಹಿಸಿಕೊಟ್ಟಿತ್ತು. ಅದರಂತೆ ಕೆಟ್ಟು ನಿಂತಿದ್ದ ಲಾರಿಯನ್ನು ದುರಸ್ತಿ ಮಾಡುತ್ತಿದ್ದ ವೇಳೆ ವೇಗವಾಗಿ ಬಂದ ಕುಪ್ಪೆಟ್ಟಿ ಮೂಲದ ಪಿಕಪ್ ವಾಹನ ಚಾಲಕನ ನಿಯಂತ್ರಣಕ್ಕೆ ಸಿಗದೆ ಕರ್ತವ್ಯ ನಿರತ ಫಿಟ್ಟರ್‌ಗಳ ಮೇಲೆ ಹರಿದಿದೆ. ಪರಿಣಾಮ ಮಧು ಹಾಗೂ ರೆಹಮಾನ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಎರಡೂ ಕಾಲುಗಳನ್ನು ಕಳೆದುಕೊಂಡಿದ್ದ ಅಫ್ಜಲ್ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.

ಮಧು ಬೇರೊಂದು ಲಾರಿಯ ಚಾಲಕರಾಗಿದ್ದು, ತನ್ನ ಸಂಸ್ಥೆಯ ಲಾರಿ ಕೆಟ್ಟು ನಿಂತಿರುವುದಕ್ಕೆ ಮೆಕ್ಯಾನಿಕ್‌ಗಳನ್ನು ಬೆಂಗಳೂರಿನಿಂದ ಕರೆತಂದು ಲಾರಿಯ ದುರಸ್ತಿ ಕಾರ್ಯದಲ್ಲಿ ಮೆಕಾನಿಕ್‌ಗಳೊಂದಿಗೆ ಸಹಕರಿಸುತ್ತಿದ್ದರು. ಘಟನೆಯ ವೇಳೆ ಕೆಟ್ಟು ನಿಂತಿದ್ದ ಲಾರಿಯ ಚಾಲಕ ಆಸೀಫ್ ಲಾರಿಯಿಂದ ತುಸು ದೂರ ನಿಂತಿದ್ದ ಕಾರಣ ಅವಘಡದಿಂದ ಪಾರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net