

ಮುಂಡರಗಿ: ನರೇಗಾ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಕೂಲಿ ಕಾರ್ವಿುಕರು ಸಲಕೆ, ಗುದ್ದಲಿ, ಬುಟ್ಟಿಗಳ ಸಮೇತ ಜಂತ್ಲಿಶಿರೂರ ಗ್ರಾ.ಪಂ.ಗೆ ಸೋಮವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ವರ್ಷದಲ್ಲಿ ನೂರು ದಿನ ನರೇಗಾ ಕೆಲಸ ನೀಡಬೇಕು ಎಂದು ಸರ್ಕಾರದ ಅಧುಸೂಚನೆಯೇ ಇದೆ. ಏ. 1ರಿಂದ ನರೇಗಾ ಕೆಲಸ ಎಲ್ಲೆಡೆ ಪ್ರಾರಂಭಗೊಂಡಿದೆ. ಆದರೆ, ಜಂತ್ಲಿಶಿರೂರ ಗ್ರಾ.ಪಂ. ವ್ಯಾಪ್ತಿಯಲ್ಲಿ ಈವರೆಗೆ ಮೂರು ದಿನ ಮಾತ್ರ ಕೆಲಸ ನೀಡಿ ಕೈಬಿಟ್ಟಿದ್ದಾರೆ. ಬೇಸಿಗೆ ಮುಗಿದರೂ 3 ದಿನ ಕೆಲಸ ನೀಡಿದ್ದು ಎಷ್ಟರ ಮಟ್ಟಿಗೆ ಸರಿ? ಎಂದು ನರೇಗಾ ಕೂಲಿ ಕಾರ್ವಿುಕರು ಪ್ರಶ್ನಿಸಿದರು.
ನರೇಗಾ ಕೂಲಿಕಾರ್ವಿುಕ ಪರುಶುರಾಮ ಹುಬ್ಬಳ್ಳಿ ಮಾತನಾಡಿ, ಮೊದಲೇ ಬರವಿದ್ದೂ ಜನರು ಸಂಕಷ್ಟದಲ್ಲಿದ್ದಾರೆ. ನರೇಗಾ ಕೆಲಸ ಸಿಕ್ಕರೆ ಅದರಿಂದ ಬರುವ ಹಣದಲ್ಲಿ ಜೀವನ ಸಾಗಿಸಬಹುದು. ಆದರೆ, ಪಿಡಿಒ, ಆಡಳಿತ ಕಮಿಟಿ ಈ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಎನ್ಎಂಆರ್ ಹಾಕುವುದಿಲ್ಲ. ಅದಕ್ಕೂ ಸತಾಯಿಸುತ್ತಾರೆ. ತಾ.ಪಂ. ಇಒ ಭೇಟಿ ನೀಡಿ ಮೇ 20ರಿಂದ ನರೇಗಾ ಕೆಲಸ ನೀಡುವಂತೆ ಪಿಡಿಒಗೆ ಎರಡ್ಮೂರು ದಿನಗಳ ಹಿಂದೆ ಸೂಚಿಸಿದ್ದಾರೆ. ನರೇಗಾ ಕೆಲಸಕ್ಕೆ ಗ್ರಾ.ಪಂ.ನಿಂದ ಅನೌನ್ಸ್ ಮಾಡಿಸಿ ಅರ್ಜಿ ಸಹ ತೆಗೆದುಕೊಂಡಿದ್ದಾರೆ. ಆದರೆ, ಕೆಲಸವನ್ನು ಕೊಡುತ್ತಿಲ್ಲ. ಕೆಲಸ ಕೇಳಿದರೆ ಮಳೆ ಮತ್ತಿತರ ನೆಪ ಹೇಳುತ್ತಾರೆ ಎಂದು ದೂರಿದರು.
ಪ್ರತಿಭಟನಾ ಸ್ಥಳಕ್ಕೆ ತಾ.ಪಂ. ಇಒ ವಿಶ್ವನಾಥ ಹೊಸಮನಿ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ರ್ಚಚಿಸಿದರು. ಸೋಮವಾರದಿಂದ ನರೇಗಾ ಕೆಲಸ ನೀಡುವಂತೆ ಹೇಳಿದ್ದೆ ಏಕೆ ನೀಡಿಲ್ಲ ಎಂದು ಪಿಡಿಒ ವಸಂತ ಗೋಕಾವಿ ಅವರನ್ನು ಪ್ರಶ್ನಿಸಿದರು. ಮಳೆ ಹಿನ್ನೆಲೆ ಕೆಲಸ ನೀಡುವುದು ತಡವಾಗಿದೆ ಎಂದರು.