ಅತಿಕ್ರಮ ತೆರವಿಗೆ ಮೂರು ದಿನಗಳ ಗಡುವು

21 DVD 01
ದೇವದುರ್ಗ ಬಸ್‌ನಿಲ್ದಾಣ ಮುಂಭಾಗದಲ್ಲಿ ರಸ್ತೆ, ಚರಂಡಿ ಅತಿಕ್ರಮಿಸಿಕೊಂಡ ಜಾಗವನ್ನು ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ ಪರಿಶೀಲಿಸಿದರು. ವ್ಯವಸ್ಥಾಪಕ ಗಂಗಾಧರ್, ಇಂಜಿನಿಯರ್ ಶರಣಪ್ಪ, ನೌಕರರಾದ ತಮ್ಮನಗೌಡ, ಸರ್ದಾರ್, ಲಕ್ಷ್ಮಣ ಇದ್ದರು.
Published on

ದೇವದುರ್ಗ: ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಪಟ್ಟಣದ ಕಲ್ಮಲಾ ತಿಂಥಿಣಿ ಬ್ರಿಡ್ಜ್ ರಾಜ್ಯ ಹೆದ್ದಾರಿ, ಚರಂಡಿ ಜಾಗ ಅತಿಕ್ರಮ ಮಾಡಿದ ಅಂಗಡಿ ಮುಂಗಟ್ಟು ಹಾಗೂ ವ್ಯಾಪಾರಿ ಮಳಿಗೆ ಮಾಲೀಕರಿಗೆ ಪುರಸಭೆ ಬುಧವಾರ ಮಾರ್ಕ್‌ಔಟ್ ಕಾರ್ಯಾಚರಣೆ ನಡೆಸಿ ತೆರವು ಮಾಡಲು ಮೂರು ದಿನಗಳ ಗಡುವು ನೀಡಲಾಯಿತು.

ಮುಖ್ಯಾಧಿಕಾರಿ ಕೆ.ಹಂಪಯ್ಯ ಮಾತನಾಡಿ, ಜಿಲ್ಲಾಧಿಕಾರಿ ಕೆ.ನಿತೀಶ ಸೂಚನೆ ಮೇರೆಗೆ ರಾಜ್ಯ ಹೆದ್ದಾರಿ, ಮುಖ್ಯರಸ್ತೆ ಅತಿಕ್ರಮ ತೆರವು ಕೆಲಸ ಪ್ರಾರಂಭಿಸಲಾಗುವುದು. ಸುಗಮ ಸಂಚಾರ ಹಾಗೂ ಜನರ ಓಡಾಟಕ್ಕೆ ಫುಟ್‌ಪಾತ್ ಸೇರಿ ರಸ್ತೆ ಅತಿಕ್ರಮ ತಡೆಗೆ ಮುಂದಾಗಿದ್ದೇವೆ. ಎರಡೂ ಬದಿ ಸೇರಿ 12ಮೀಟರ್ ರಸ್ತೆ ಅಳತೆ ಮಾಡಿ ಮಾರ್ಕ್‌ಔಟ್ ಮಾಡಲಾಗಿದೆ.

ಜಾಗ ಅತಿಕ್ರಮಿಸಿಕೊಂಡ ಕಟ್ಟಡ ಮಾಲೀಕರು, ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ.

ಮಾರ್ಕ್‌ಔಟ್ ಮಾಡಿದ ಜಾಗ ತೆರವು ಮಾಡಲು ಮೂರುದಿನ ಕಾಲಾವಕಾಶ ನೀಡಲಾಗಿದೆ. ತೆರವು ಮಾಡದಿದ್ದರೆ ಪೊಲೀಸ್ ಭದ್ರತೆಯೊಂದಿಗೆ ತೆರವು ಕಾರ್ಯಾಚರಣೆ ನಡೆಸಲಾಗುವುದು. ಲೋಕೋಪಯೋಗಿ ಇಲಾಖೆಯಿಂದ ಜಹೀರುದ್ದೀನ್ ಪಾಷಾ ವೃತ್ತದವರೆಗೆ ಎರಡೂ ಬದಿಗೆ ಮಾರ್ಕ್‌ಔಟ್ ಮಾಡಲಾಗಿದೆ. ಶಹಾಪುರ ರಸ್ತೆಯಲ್ಲೂ ಮಾರ್ಕ್‌ಔಟ್ ಮಾಡಲಾಗಿದೆ. ಅತಿಕ್ರಮ ಮಾಡಿಕೊಂಡವರು ಮೂರು ದಿನಗಳಲ್ಲಿ ತೆರವು ಮಾಡಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net