ಮೂರು ದಿನಗಳ ಹಂಪಿ ಉತ್ಸವಕ್ಕೆ ವರ್ಣರಂಜಿತ ತೆರೆ

Hampi Utsav Srikrishnadevaraya Nrutya Rupaka
ಬೆಂಗಳೂರಿನ ಅರ್ಥ ಚಾರಿಟಬಲ್ ಟ್ರಸ್ಟ್ ಕಲಾವಿದರು ಶ್ರೀಕೃಷ್ಣ ದೇವರಾಯ ನೃತ್ಯ ರೂಪಕ ಪ್ರದರ್ಶಿಸಿದರು.
Published on

ಕಳೆಗಟ್ಟಿದ ಕನ್ನಡ ನಾಡಿನ ಸಂಸ್ಕೃತಿ >> ವಿಜಯನಗರ ವೈಭವಕ್ಕೆ ಲಕ್ಷಾಂತರ ವೀಕ್ಷಕರು

ಮಂಜುನಾಥ ಅಯ್ಯಸ್ವಾಮಿ ಹಂಪಿ

ಹಂಪಿಯ ಸ್ಮಾರಕಗಳ ನಡುವೆ ಮೂರು ದಿನ ವಿಜಯನಗರ ಗತವೈಭವ ಸಾರಿದ ಹಂಪಿ ಉತ್ಸವದ ಕೊನೆಯ ದಿನ ಯುವಸಮೂಹ ಹರಿದು ಬಂತು. ಅದ್ದೂರಿಯಾಗಿ ನಡೆದ ಉತ್ಸವ ಭಾನುವಾರ ರಾತ್ರಿ ವೈಭವದ ತೆರೆಕಂಡಿತು.

ನಾಡಿನ ಖ್ಯಾತ ಕಲಾವಿದರೊಂದಿಗೆ ಸ್ಥಳೀಯ ಕಲಾವಿದರ ಪ್ರತಿಭೆ ಪ್ರದರ್ಶನಕ್ಕೆ ಹಂಪಿ ಉತ್ಸವ ವೇದಿಕೆಯಾಯಿತು. ಮೊದಲ ದಿನ ಜನ ಒಂದಷ್ಟು ಕಡಿಮೆ ಎನಿಸಿದರೂ, ಉಳಿದೆರಡು ದಿನಗಳು ಹಂಪಿಯಲ್ಲಿ ಎಲ್ಲಿ ನೋಡಿದರೂ ಜನರು ಕಂಡುಬಂದರು.

Hampi Utsav Tourist Visit Vijayavittala Temple
ಉತ್ಸವ ಹಿನ್ನೆಲೆಯಲ್ಲಿ ಹಂಪಿಯ ವಿಜಯ ವಿಠಲ ದೇಗುಲದಲ್ಲಿ ಭಾನುವಾರ ಕಂಡು ಬಂದ ಯುವ ಸಮೂಹ.

ಪ್ರಮುಖ ಗಾಯಕರ ಕಾರ್ಯಕ್ರಮಗಳು ನಡೆದ ಗಾಯತ್ರಿಪೀಠ ಮುಖ್ಯ ವೇದಿಕೆಯ ಮುಂದೆ ಜನೋತ್ಸಾಹ ಉತ್ಸವದ ವಾತಾವರಣವನ್ನು ಇಮ್ಮಡಿಗೊಳಿಸಿತು. ಜಿಲ್ಲಾಡಳಿತ ಸುತ್ತಮುತ್ತಲಿನ ಗ್ರಾಮಗಳಿಂದ ಉಚಿತ ಬಸ್ ಸಂಚಾರ ಮತ್ತು ಶನಿವಾರ ಹೊಸಪೇಟೆ ತಾಲೂಕು ವ್ಯಾಪ್ತಿಯ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಿಸಿದ್ದು ಉತ್ಸವದಲ್ಲಿ ಜನರ ಸಂಖ್ಯೆ ಮತ್ತಷ್ಟು ಹೆಚ್ಚಲು ಕಾರಣವಾಯಿತು.

ಮೊದಲ ದಿನ ಗಾಯಕ ರಾಜೇಶ್ ಕೃಷ್ಣನ್ ಅವರ ಗಾಯನಕ್ಕೆ ಮನಸೋತ ಜನರು ಎರಡನೇ ದಿನ ನಾಯಕ ನಟ ರಮೇಶ್ ಅರವಿಂದ್ ಅವರನ್ನು ಕಣ್ತುಂಬಿಕೊಂಡರು. ನಟ ವಿಜಯರಾಘವೇಂದ್ರ ಹಾಗೂ ಇತರ ನಟ-ನಟಿಯರು ಜನರನ್ನು ರಂಜಿಸಿದರು. ಶನಿವಾರ 11.30ರ ಸುಮಾರಿಗೆ ವೇದಿಕೆಗೆ ಆಗಮಿಸಿದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮತ್ತವರ ತಂಡದ ಗಾಯನಕ್ಕೆ ಪ್ರೇಕ್ಷಕರು ಕೂತಲ್ಲೇ ಕುಣಿದು ಕುಪ್ಪಳಿಸಿದರು.

ವಿರೂಪಾಕ್ಷ ದೇಗುಲದ ಆವರಣದಲ್ಲಿ ಮೂರು ದಿನ ನಡೆದ ಕವಿಗೋಷ್ಠಿ, ಮಹಿಳಾಗೋಷ್ಠಿ, ಯುವಗೋಷ್ಠಿ ಗಮನ ಸೆಳೆದವು. ಫಲಪುಷ್ಪ ಪ್ರದರ್ಶನ, ಮತ್ಸ್ಯ ಮೇಳ, ಸಿರಿಧಾನ್ಯ ಮೇಳ, ಕುಸ್ತಿ ಪಂದ್ಯಾವಳಿ, ಗುಂಡು ಎತ್ತುವ ಸ್ಪರ್ಧೆ, ಬಂಡಿಗಾಲಿ ಜೋಡಿಸುವ ಸ್ಪರ್ಧೆಗಳು ಹಂಪಿ ಉತ್ಸವದ ಮೆರುಗು ಹೆಚ್ಚಿಸಿದವು.

ಆನೆ ಲಾಯದ ಬಳಿ ವಿದ್ಯುತ್ ದೀಪದ ಬೆಳಕಿನಲ್ಲಿ ಪ್ರದರ್ಶನಗೊಂಡ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರಿತು. ಸ್ಮಾರಕಗಳು ಹಾಗೂ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಆಲಂಕರಿಸಿದ್ದರಿಂದ ಹಂಪಿ ಜಗಮಗಿಸಿತು.

ಹರಿದುಬಂದ ಜನಸಾಗರ

Hampi Utsav 3rd Day Crowd
ಹಂಪಿ ಉತ್ಸವದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಅಪಾರ ಜನರು.

ಉತ್ಸವದ ಮೂರ ದಿನ ಸಹಸ್ರಾರು ಜನರು ಬಿರುಬಿಸಿಲನ್ನೂ ಲೆಕ್ಕಿಸದೆ ಸಾಗರೋಪಾದಿಯಲ್ಲಿ ಹಂಪಿಗೆ ಧಾವಿಸಿದರು. ಯುವಜನತೆ ಹಂಪಿಯ ಬೆಟ್ಟ-ಗುಡ್ಡ, ಸ್ಮಾರಕಗಳನ್ನು ಕಣ್ತುಂಬಿಕೊಂಡಿತು. ಜಾಲಿ ರೈಡ್ ಮೂಲಕ ರಜೆಯ ಮಜಾ ಅನುಭವಿಸಿದರು. ವಿದೇಶಿ ಪ್ರವಾಸಿಗರ ಅಬ್ಬರ ಮೊದಲ ದಿನಕ್ಕಿಂತ ಎರಡು ಮತ್ತು ಮೂರನೇ ದಿನ ಹೆಚ್ಚಿತ್ತು.

ನೆತ್ತಿ ಸುಡುವ ಉರಿಬಿಸಿಲು ಇದ್ದುದರಿಂದ ತಲೆಯ ಮೇಲೆ ಕರವಸ್ತ್ರ, ಕೈಯಲ್ಲಿ ನೀರಿನ ಬಾಟಲಿ ಹಿಡಿದುಕೊಂಡು ಪ್ರವಾಸಿಗರು ಹಂಪಿ ಸುತ್ತಾಡಿದರು. ಸ್ಮಾರಕಗಳ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಹಗಲಿಡೀ ಸ್ಮಾರಕಗಳ ಚಿತ್ತಾರ ಕಣ್ತುಂಬಿಕೊಂಡ ಯುವ ಸಮೂಹ ಸಂಜೆಯಾಗುತ್ತಲೇ ಉತ್ಸವದ ವೇದಿಕೆಗಳತ್ತ ಹೆಜ್ಜೆ ಹಾಕಿತು. ಉತ್ಸವಕ್ಕೆ ಹರಿದುಬಂದ ಜನಸಾಗರ ಕಂಡು ಅಧಿಕಾರಿಗಳು ಕೂಡ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

Hampi Utsav Janapada Utsava DC MLA
ಜಾನಪದ ವಾಹಿನಿ ಸಂದರ್ಭ ವೀರಗಾಸೆ ಕುಣಿತಕ್ಕೆ ಶಾಸಕ ಎಚ್.ಆರ್.ಗವಿಯಪ್ಪ ಮತ್ತು ಡಿಸಿ ಎಂ.ಎಸ್.ದಿವಾಕರ ಅವರು ತಾಷಾರಾಮ್‌ಡೋಲ್ ಭಾರಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್

ಉತ್ಸವದ ಪ್ರಮುಖ ವೇದಿಕೆ ಸೇರಿದಂತೆ ಇತರೆಡೆ ಜನರನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡಿದರು. ಸ್ಟಾರ್ ಕಲಾವಿದರು ವೇದಿಕೆಗೆ ಬರುವಾಗ ಮತ್ತು ನಿರ್ಗಮಿಸುವಾಗ ಉಂಟಾದ ಗೌಜು-ಗದ್ದಲ ನಿಯಂತ್ರಣಕ್ಕೆ ಖಾಕಿ ಪಡೆ ಬೆವರಿಳಿಸಿತು. ಇದರಿಂದಾಗಿ ಭಾನುವಾರ ಭದ್ರತೆ ಮತ್ತಷ್ಟು ಬಿಗಿಯಾಗಿತ್ತು. ಹಂಪಿ ಪ್ರವೇಶ ದ್ವಾರದಿಂದ ವೇದಿಕೆಗಳವರೆಗೆ ಅಚ್ಚುಕಟ್ಟು ವ್ಯವಸ್ಥೆ ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net