

ಮೈಸೂರು: ರಾಜ್ಯದ ವಿವಿಧ ಭಾಗಗಳಿಂದ ಸಿರಿಧಾನ್ಯ ಬೆಳೆಗಾರರ ಗುಂಪುಗಳು ಪಾಲ್ಗೊಂಡಿರುವ ಮೇಳದಲ್ಲಿ ಆಹಾರ, ಕೃಷಿ ಸಂಸ್ಕೃತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ರೈತ ಗುಂಪುಗಳು ಚರ್ಚೆ ನಡೆಸಲಿವೆ.
ಇತ್ತೀಚಿನ ದಿನಗಳಲ್ಲಿ ಜನಪ್ರಿಯತೆ ಪಡೆಯುತ್ತಿರುವ ಸಿರಿಧಾನ್ಯಗಳು, ಹವಾಮಾನ ಬದಲಾವಣೆಯ ಬಿಕ್ಕಟ್ಟಿಗೆ ಪರಿಹಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ವಾತಾವರಣದ ವೈಪರೀತ್ಯಕ್ಕೆ ಹೊಂದಿಕೊಳ್ಳುವ ಈ ಧಾನ್ಯಗಳನ್ನು ಭಾರತದ ಭವಿಷ್ಯದ ಆಹಾರ ಮತ್ತು ಕೃಷಿ ಬೆಳೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಬರಗಾಲದಲ್ಲೂ ಹುಲುಸಾಗಿ ಬೆಳೆದು ಸಮೃದ್ಧ ಫಸಲು ಕೊಡುವ ಸಿರಿಧಾನ್ಯಗಳು ಬರಗಾಲದ ಮಿತ್ರ ಎಂದೇ ಕರೆಸಿಕೊಂಡಿದ್ದು, ರಾಗಿ, ಸಾವೆ, ನವಣೆ, ಸಜ್ಜೆ, ಜೋಳ, ಹಾರಕ, ಬರಗು, ಊದಲು, ಕೊರಲುಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕರ್ನಾಟಕ ಸಿರಿಧಾನ್ಯಗಳ ತವರೂರು. ಈ ನಿಟ್ಟಿನಲ್ಲಿ ರೈತರನ್ನು ಸಿರಿಧಾನ್ಯ ಕೃಷಿಯತ್ತ ಪ್ರೇರೇಪಿಸುವುದು ಮೇಳದ ಉದ್ದೇಶವಾಗಿದೆ.
ತಳಿಗಳ ಪ್ರದರ್ಶನ, ಪ್ರಾತ್ಯಕ್ಷಿಕೆಯ ಆಕರ್ಷಣೆ:
ರಾಜ್ಯದ ವಿವಿಧ ಭಾಗಗಳ ಸಾವಯವ ಕೃಷಿಕರ ಗುಂಪುಗಳು, ರೈತ ಉತ್ಪಾದಕ ಕಂಪನಿಗಳು, ಬೀಜ ಸಂರಕ್ಷಕರು, ಮಹಿಳಾ ಸಂಘಗಳಿಂದ ಸಿರಿಧಾನ್ಯ ತಳಿಗಳ ಪ್ರದರ್ಶನ, ಬಿತ್ತನೆ ಬೀಜ ವಿನಿಮಯ, ನಿಸರ್ಗಸ್ನೇಹಿ ಉತ್ಪನ್ನಗಳ ಪ್ರದರ್ಶನ ಏರ್ಪಡಿಸಲಾಗಿದೆ. ಸಾವಕ್ಕಿ, ನವಣಕ್ಕಿ, ಕೆಂಪಕ್ಕಿ, ಕೊರಲು, ಹಾರಕದಂತಹ ತಳಿಗಳು ಮೇಳದಲ್ಲಿ ಲಭ್ಯವಿವೆ. ರಾಗಿ ತೆನೆಯಿಂದ ತೋರಣ ಮಾಡುವ ಪ್ರಾತ್ಯಕ್ಷಿಕೆ ವಿಶೇಷ ಆಕರ್ಷಣೆಯಾಗಿದೆ.
ರಾಗಿ ತೆನೆಯಿಂದ ತಯಾರಿಸುವ ತೋರಣ, ರೊಟ್ಟಿಯಷ್ಟೇ ಅಲ್ಲದೆ ಹತ್ತಾರು ತಿನಿಸುಗಳಿಗೆ ಬಳಸಬಹುದಾದ ಜೋಳದ ನಲವತ್ತು ತಳಿಗಳು, ಎಲ್ಲೂ ಕಾಣಸಿಗದ ಕೆಂಪು ಮತ್ತು ಕಪ್ಪು ನವಣೆಯನ್ನು ವೀಕ್ಷಿಸಬಹುದು.
ಮೇಳದ ಅಂಗವಾಗಿ ಸಂಜೆ ಹೊತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿವೆ. ಗುಜರಾತ್ ಗಾಯಕರು ಗೀತೆ ಪ್ರಸ್ತುತಪಡಿಸಲಿದ್ದು, ಸಿರಿಧಾನ್ಯದ ಮಹತ್ವ ಸಾರುವ ಹಾಡುಗಳ ಗಾಯನವಿದೆ. ಸ್ವಸಹಾಯ ಸಂಘದ ಮಹಿಳೆಯರು ರಾಗಿ ಶಾವಿಗೆಯನ್ನು ಸ್ಥಳದಲ್ಲೇ ತಯಾರಿಸಿ ಕೊಡಲಿದ್ದು ಆಹಾರಪ್ರಿಯರು ಸವಿಯಬಹುದು.
ಯುವಪೀಳಿಗೆಯನ್ನು ಸಿರಿಧಾನ್ಯದತ್ತ ಸೆಳೆಯಲು ಮಿಲೆಟ್ ಬಿಸ್ಕತ್ತು, ಚಕ್ಕುಲಿ, ನಿಪ್ಪಟ್ಟು, ಕೋಡಬಳೆ, ಉಂಡೆಗಳು, ಸಾಮೆ, ಜೋಳದ ರೊಟ್ಟಿ, ಸಾಮೆದೋಸೆ, ಹಾರಕದ ಬೇಳೆಬಾತ್, ಸಾಮೆ ಇಡ್ಲಿ, ಪಾಯಸ ಇನ್ನಿತರ ಆಹಾರ ತಿನಿಸು ಮೇಳದಲ್ಲಿ ಲಭ್ಯವಿವೆ. ಬಾಯಿ ಚಪ್ಪರಿಸಲು ದೇಸಿ ಅಕ್ಕಿಗಳ ಅಡುಗೆ, ಕೈತೋಟದಲ್ಲಿ ಬಿತ್ತಲು ನಾಟಿ ಬೀಜಗಳು ಮತ್ತು ಸಾವಯವ ಪದಾರ್ಥಗಳು ದೊರಕಲಿವೆ. ಮೌಲ್ಯವರ್ಧಿತ ಉತ್ಪನ್ನಗಳು, ತರಹೇವಾರಿ ತಿಂಡಿ-ತಿನಿಸುಗಳ ಜತೆಗೆ ಕೃಷಿ ಸಂಬಂಧಿ ಪುಸ್ತಕಗಳನ್ನು ಕೊಂಡುಕೊಳ್ಳಬಹುದಾಗಿದೆ.