

ಚಿಕ್ಕಮಗಳೂರು: ರಾಷ್ಟ್ರದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ರೂಪಿಸಲು ಹೊಸದಾಗಿ ಮೂರು ಕ್ರಿಮಿನಲ್ ಅಪರಾಧ ಕಾನೂನುಗಳನ್ನು ಇಂದಿನಿಂದ ಜಾರಿಗೊಳಿಸಲಾಗಿದೆ ಎಂದು ಹಿರಿಯ ವಕೀಲ ಎಸ್.ಹೆಚ್.ಮಹೇಶ್ ಕುಮಾರ್ ಹೇಳಿದರು.
ಜಿಲ್ಲಾ ನ್ಯಾಯಾಲಯದಲ್ಲಿ ಚಿಕ್ಕಮಗಳೂರು ವಕೀಲರ ಸಂಘ ಆಯೋಜಿಸಿದ್ದ ಹೊಸ ಕಾನೂನುಗಳ ಪರಿಚಯ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಭಾರತೀಯ ದಂಡ ಸಂಹಿತೆ, ಹಿಂದಿನ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ ಬದಲಿಗೆ ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಎಂಬುವವು ಹೊಸದಾಗಿ ಅನುಷ್ಟಾನಗೊಳ್ಳುವ ಕಾಯ್ದೆಗಳಾಗಿವೆ ಎಂದು ತಿಳಿಸಿದರು.
ಜೀರೋ ಎಫ್‌ಐಆರ್, ಆನ್‌ಲೈನ್ ಮೂಲಕ ದೂರು ಸಲ್ಲಿಕೆಗೆ ಅವಕಾಶ, ಎಸ್‌ಎಂಎಸ್ ಮೂಲಕ ಸಮನ್ಸ್ ಕಳುಹಿಸುವುದು ಮತ್ತು ಹೇಯ ಅಪರಾಧ ನಡೆದಾದ ಆ ಸ್ಥಳದ ವೀಡೀಯೋ ಚಿತ್ರೀಕರಣ ಕಡ್ಡಾಯ ಗೊಳಿಸಿರುವ ನಿಬಂಧನೆಗಳನ್ನು ಹೊಸ ಕಾನೂನುಗಳು ಆಧುನಿಕ ನ್ಯಾಯವ್ಯವಸ್ಥೆಯನ್ನು ಜಾರಿಗೆ ತಂದಿದೆ ಎಂದು ವಿಶ್ಲೇಷಿಸಿದರು.
ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ, ಇಂದಿನಿಂದ ದಾಖಲಾಗುವ ಪ್ರತಿಯೊ ಂದು ಪ್ರಕರಣಗಳು ಹೊಸ ಕಾನೂನಿನ ನಿಯಾಮನುಸಾರ ನಡೆಯಲಿದೆ. ಅಲ್ಲದೇ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಪ್ರಕರಣಗಳು ಮಾತ್ರ ಹಿಂದಿನ ಕಾನೂನು ನಿಯಮದಂತೆ ಪಾಲನೆಯಾಗಲಿದೆ ಎಂದರು.
ಪ್ರತಿಯೊಂದು ಎಫ್‌ಐಆರ್‌ಗಳನ್ನು 154ನೇ ಸೆಕ್ಷನ್ ಬದಲಾಗಿ ಭಾರತಿಯ ನಾಗರಿಕ ಸುರಕ್ಷಾ ಸಂಹಿತೆಯ 173ನೇ ಸೆಕ್ಷನ್ ಅಡಿಯಲ್ಲಿ ದಾಖಲಿಸಿಕೊಳ್ಳಲಾಗುತ್ತಿದೆ. ಜತೆಗೆ ಹೊಸದಾಗಿ ರಚನೆಯಾಗಿರುವ ಕಾನೂನುಗಳಲ್ಲಿ ಲೋಪ ದೋಷಗಳು ಕಂಡುಬಂದಲ್ಲಿ ಸರಿಪಡಿಸಿಕೊಳ್ಳುವ ಕಾರ್ಯಕ್ಕೂ ಮುಂದಾಗುವುದು ಎಂದು ಹೇಳಿದರು.
ಸಂಘದ ಉಪಾಧ್ಯಕ್ಷ ಕೆ.ಎಸ್.ಶರತ್‌ಚಂದ್ರ, ಕಾರ್ಯದರ್ಶಿ ಆರ್.ಅನಿಲ್ಕುಮಾರ್, ಖಜಾಂಚಿ ಡಿ.ಬಿ.ದೀಪಕ್, ಸಹ ಕಾರ್ಯದರ್ಶಿ ಎನ್.ವಿ.ಪ್ರಿಯದರ್ಶಿನಿ ಮತ್ತಿತರರು ಹಾಜರಿದ್ದರು.