ಹುಲಿ ದಾಳಿಗೆ ಮೂರು ಹಸುಗಳು ಮೃತ

22-GPT-1
ಗುಂಡ್ಲುಪೇಟೆ ತಾಲೂಕಿನ ಮಲ್ಲಮ್ಮನಹುಂಡಿ ಗ್ರಾಮದಲ್ಲಿ ಜಾನುವಾರುಗಳನ್ನು ಕೊಂದ ಹುಲಿ ಪತ್ತೆಗೆ ಅರಣ್ಯ ಸಿಬ್ಬಂದಿ ಕೂಂಬಿಂಗ್ ನಡೆಸುತ್ತಿರುವುದು.
Published on

ಗುಂಡ್ಲುಪೇಟೆ: ತಾಲೂಕಿನ ಮಲ್ಲಮ್ಮನಹುಂಡಿ ಗ್ರಾಮದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಹುಲಿ ದಾಳಿಗೆ ಮೂರು ಹಸುಗಳು ಮೃತಪಟ್ಟಿವೆ.

ಗ್ರಾಮದ ಗುರುಸಿದ್ದಪ್ಪ ಎಂಬುವರು ತಮ್ಮ ಹಸುಗಳನ್ನು ಜಮೀನಿನತ್ತ ಕರೆದೊಯ್ಯುವ ವೇಳೆ ಗ್ರಾಮದ ಬಳಿಯೇ ಹುಲಿ ದಾಳಿ ನಡೆಸಿದೆ. ಹುಲಿಯನ್ನು ಕಂಡ ಗ್ರಾಮಸ್ಥರು ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಪೊದೆಯತ್ತ ಓಡಿ ಹೋಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಮೂರು ಹಸುಗಳು ರಕ್ತಸ್ರಾವದಿಂದ ಮೃತಪಟ್ಟಿವೆ.

ವಿಷಯ ತಿಳಿದ ಬಫರ್ ವಲಯದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಎಸ್‌ಟಿಪಿಎಫ್‌ನ ಮೂರು ತಂಡಗಳನ್ನು ರಚಿಸಿ ಸಮೀಪದ ತೋಪಿನ ಬಳಿ ಕೂಂಬಿಂಗ್ ನಡೆಸಿದರೂ ಹುಲಿಯ ಜಾಡು ಪತ್ತೆಯಾಗಲಿಲ್ಲ. ಆದ್ದರಿಂದ ಸ್ಥಳದಲ್ಲಿ ಕ್ಯಾಮರಾ ಹಾಗೂ ಬೋನು ಇರಿಸಲಾಗುತ್ತಿದೆ. ಜಾನುವಾರು ನಷ್ಟಕ್ಕೆ ಕೂಡಲೇ ಪರಿಹಾರ ನೀಡಲಾಗುವುದು ಎಂದು ಎಸ್‌ಟಿಪಿಎಫ್ ಹಾಗೂ ಬಫರ್ ವಲಯದ ಆರ್‌ಎಫ್‌ಒ ಎನ್.ಪಿ.ನವೀನ್ ಕುಮಾರ್ ತಿಳಿಸಿದರು.

ಆತಂಕದಲ್ಲಿ ಗ್ರಾವಸ್ಥರು: ಹಿಂದೆ ಕಾಡಂಚಿನ ಗ್ರಾಮಗಳಿಗೆ ಸೀಮಿತವಾಗಿದ್ದ ಹುಲಿ ಮತ್ತು ಚಿರತೆಗಳ ಕಾಟ ಇದೀಗ ಗ್ರಾಮಾಂತರ ಪ್ರದೇಶಗಳಿಗೂ ವ್ಯಾಪಿಸಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗುತ್ತಿದೆ.

ಕಳೆದ ತಿಂಗಳು ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ಚಿರತೆಯ ದಾಳಿಗೆ ಜಾನುವಾರುಗಳು ಬಲಿಯಾಗಿದ್ದವು. ಹತ್ತು ದಿನಗಳ ಹಿಂದ ಲಕ್ಕೂರು ಗ್ರಾಮದ ಕಬ್ಬಿನ ಗದ್ದೆಯಲ್ಲಿ ಚಿರತೆಯ ರಾತ್ರಿ ವೇಳೆ ತನ್ನ ಮೂರು ಮರಿಗಳೊಂದಿಗೆ ಕಾಣಿಸಿಕೊಂಡಿತ್ತು. ವಾರದ ಹಿಂದೆ ಹುಲಿ ದಾಳಿ ನಡೆಸಿ ಕಗ್ಗಳ ಗ್ರಾಮದ ಮಣಿಸ್ವಾಮಿ ಎಂಬುವರ ಜಮೀನಿನಲ್ಲಿ ಕರುವನ್ನು ಕೊಂದುಹಾಕಿತ್ತು. ಮರು ದಿನವೇ ಸೆಕ್ಷನ್ 4 ಗೆ ಸೇರಿದ ಗುಡ್ಡದ ತಪ್ಪಲಿನಲ್ಲಿರುವ ಕಗ್ಗಳದಹುಂಡಿ ಗ್ರಾಮದ ಮುಜೀಬ್ ಎಂಬುವರ ಜಮೀನಿನಲ್ಲಿ ಹಸುವನ್ನು ಕೊಂದು ಹಾಕಿತ್ತು.

ಕುಂದಕೆರೆ ವಲಯದಿಂದ ಹೊರಬಂದ ಹುಲಿಗಳು: 2017ರಲ್ಲಿ ಬಂಡೀಪುರಕ್ಕೆ ಬೆಂಕಿ ಬಿದ್ದ ಸಂದರ್ಭದಲ್ಲಿ ಅರಣ್ಯ ಪ್ರದೇಶದಿಂದ ಹೊರಬಂದ ಮೂರು ಹುಲಿ ಮರಿಗಳು ಬಫರ್ ವಲಯದಲ್ಲಿ ನೆಲೆ ಕಂಡುಕೊಂಡ ಬಳಿಕ ಸ್ಕಂದಗಿರಿ ಪಾರ್ವತಾಂಬಾ ಬೆಟ್ಟ, ಸೆಕ್ಷನ್ 4 ಗೆ ಸೇರಿದ ಗುಡ್ಡಗಳಲ್ಲಿ ಸಂಚರಿಸುತ್ತಿವೆ. 2018 ರಲ್ಲಿ ಪಾರ್ವತಿ ಬೆಟ್ಟದ ಸಮೀಪ ಜಾನುವಾರು ಮೇಲೆ ದುಷ್ಕರ್ಮಿಗಳು ವಿಷ ಸುರಿದಿದ್ದರಿಂದ ಒಂದು ಹುಲಿ ಹಾಗೂ ಒಂದು ಚಿರತೆ ಮೃತಪಟ್ಟಿದ್ದವು. ಉಳಿದಂತೆ ಎರಡು ಹುಲಿಗಳು ಈಗ ದೊಡ್ಡದಾಗಿ ಬೆಳೆದು ಗೋಪಾಲಸ್ವಾಮಿ ಬೆಟ್ಟ ವಲಯದಿಂದ ಬಫರ್ ವಲಯದಲ್ಲಿ ಸಂಚರಿಸುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net