

ಮೈಸೂರು: ಕಾರು ಪಾರ್ಕಿಂಗ್ ಮಾಡುವ ವಿಚಾರದಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿದ ಮೂವರು ಅಪರಾಧಿಗಳಿಗೆ ಹುಣಸೂರಿನ 8ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಬುಧವಾರ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಹುಣಸೂರು ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕಿರಿಜಾಜಿ ಗ್ರಾಮದ ನಿವಾಸಿಗಳಾದ ಕುಮಾರ, ಮನು, ರವಿ ಶಿಕ್ಷೆಗೆ ಗುರಿಯಾದವರು. 19-5-2020 ರಂದು ಕಿರಿಜಾಜಿ ಗ್ರಾಮದ ಪ್ರವೀಣ ಎಂಬವರು ತಮ್ಮ ಕಾರನ್ನು ಪಾರ್ಕ್ ಮಾಡುವ ಸಂದರ್ಭ ಪಾರ್ಕಿಂಗ್ ವಿಚಾರವಾಗಿ ಕುಮಾರ, ಮನು, ರವಿ ಹಾಗೂ ಪ್ರವೀಣ ನಡುವೆ ಮಾತಿನ ಚಕಮಕಿ ನಡೆಯಿತು. ಆ ಸಂದರ್ಭ ಅಪರಾಧಿಗಳು ಪ್ರವೀಣ ಅವರ ಮೇಲೆ ಇಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಜಗಳ ಬಿಡಿಸಲು ಹೋದ ವಿಠಲ ಎಂಬವರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದರು.
ನ್ಯಾಯಾಧೀಶರಾದ ಪಾಟೀಲ್ ಮೋಹನ್ ಕುಮಾರ್ ಭೀಮನಗೌಡ ಪ್ರಕರಣದ ವಿಚಾರಣೆ ನಡೆಸಿ ಅಪರಾಧಿಗಳಿಗೆ 2 ವರ್ಷ ಸಾದಾ ಶಿಕ್ಷೆ ಹಾಗೂ ತಲಾ 2,500 ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಎಂ.ಸಿ. ಶಿವಶಂಕರಮೂರ್ತಿ ವಾದಿಸಿದರು.