ಸಚಿವ ಸಂಪುಟ ಭರ್ತಿಗೆ ಮೂರು ಅವಕಾಶ: ಸಚಿವರ ಕಾರ್ಯಕ್ಷಮತೆ ವರದಿ ಪಡೆದ ಬಿಜೆಪಿ ವರಿಷ್ಠರು

BJP 11 Feb 20
Published on

ಬೆಂಗಳೂರು: ರಾಜ್ಯ ಸಚಿವ ಸಂಪುಟ ಭರ್ತಿ ವಿಚಾರವಾಗಿ ಒಂದಷ್ಟು ಬೆಳವಣಿಗೆ ನಡೆದಿದ್ದು, ಬಿಜೆಪಿ ವರಿಷ್ಠರು ಸಚಿವರ ಕಾರ್ಯಕ್ಷಮತೆ ವರದಿ ಪಡೆದಿದ್ದರೂ ಕೇಂದ್ರ ಗೃಹಸಚಿವ ಅಮಿತ್ ಷಾ ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕವಷ್ಟೇ ಮುಂದಿನ ತೀಮಾನ ಪ್ರಕಟ ಸಾಧ್ಯತೆ ಹೆಚ್ಚಿದೆ.

ಸಂಪುಟ ವಿಸ್ತರಿಸಬೇಕೇ ಅಥವಾ ಪುನಾರಚಿಸಬೇಕೇ? ಎಂಬ ಗೊಂದಲ ಹೈಕಮಾಂಡ್​ನಲ್ಲೂ ಇದೆ. ಹೀಗಾಗಿ ಯಾವುದು ಸೂಕ್ತ ಎಂದು ಪ್ರಮುಖರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಕೈಗೊಳ್ಳಬಹುದು ಎಂದು ಸಂಪುಟದ ಹಿರಿಯ ಸಚಿವರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸಂಪುಟ ವಿಸ್ತರಣೆ ಸಾಕೆಂಬ ತೀಮಾನವಾದರೆ ಆಗಸ್ಟ್ ಕೊನೇ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಕ್ರಿಯೆ ಮುಗಿಯಬಹುದು. ಒಂದು ವೇಳೆ ಪುನಾರಚನೆ ಎಂದಾದರೆ ಒಂದಷ್ಟು ತಾಲೀಮು ನಡೆಸಿ, ಹೊಸ ಸಮೀಕರಣ, ದೂರದೃಷ್ಟಿ ಆಲೋಚನೆಯಲ್ಲಿ ತೀಮಾನ ಮಾಡಲಾಗುತ್ತದೆ. ಈ ಕಾರ್ಯ ಅಕೊ್ಟೕಬರ್ ಅಥವಾ ನವೆಂಬರ್​ವರೆಗೂ ಮುಂದುವರಿಯಬಹುದು ಎಂಬ ಅಭಿಪ್ರಾಯ ಪಕ್ಷದಲ್ಲಿದೆ.

ಕಾರ್ಯಕ್ಷಮತೆಯೇ ಆಧಾರ: ಸಂಪುಟ ಪುನಾರಚನೆ ಮಾಡುವು ದಾದರೆ ಸಚಿವರ ಕಾರ್ಯಕ್ಷಮತೆಯನ್ನೇ ಆಧಾರವಾಗಿ ವರಿಷ್ಠರು ಪರಿಗಣಿಸಲಿದ್ದಾರೆ. ಈಗಾಗಲೆ ಬಿ.ಎಸ್.ಯಡಿಯೂರಪ್ಪ ಸಂಪುಟದ ಪ್ರತಿಯೊಬ್ಬ ಸಚಿವರ ಕಾರ್ಯಕ್ಷಮತೆ ವರದಿಯನ್ನು ದೆಹಲಿ ನಾಯಕರು ಪಡೆದುಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಇಲಾಖೆಯ ಕಾರ್ಯದಲ್ಲಿ ಎಷ್ಟರ ಮಟ್ಟಿಗೆ ಮಂತ್ರಿಗಳು ತೊಡಗಿಸಿಕೊಂಡಿದ್ದಾರೆ. ಯೋಜನೆಗಳ ಜಾರಿಗೆ ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಜನರೊಂದಿಗಿನ ಒಡನಾಟ, ಕ್ರಿಯಾಶೀಲತೆ, ನಾಡಿಗೆ ಎದುರಾದ ಸಂಕಷ್ಟ ಕಾಲದಲ್ಲಿ ಅವರ ಸ್ಪಂದನೆ, ಜಿಲ್ಲೆಗಳ ಪ್ರವಾಸ ಹೀಗೆ ವಿವಿಧ ವಿಚಾರಗಳನ್ನು ವರದಿ ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ಪುನಾರಚನೆ ಅಥವಾ ವಿಸ್ತರಣೆ ಯಾವುದೇ ಆದರೂ ಮೊದಲು ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜತೆ ಸಿಎಂ ಯಡಿಯೂರಪ್ಪ ಚರ್ಚೆ ನಡೆಸಬೇಕು. ಆ ನಂತರ ಇಬ್ಬರೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರೊಂದಿಗೆ ಸಮಾಲೋಚನೆ ಮಾಡಬೇಕು. ಅಂತಿಮವಾಗಿ ಅಮಿತ್ ಷಾ ಅವರೊಂದಿಗೆ ನಡ್ಡಾ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆನ್ನಲಾಗಿದೆ.

ಯೋಗೇಶ್ವರ್ ಸಲುವಾಗಿ ನಡ್ಡಾ ಭೇಟಿ

ನವದೆಹಲಿ: ನಾನು ಡಿಸಿಎಂ ಹುದ್ದೆ ಕೇಳಿಯೇ ಇಲ್ಲ. ಸ್ನೇಹಿತ ಸಿ.ಪಿ. ಯೋಗೇಶ್ವರ್ ಸಲುವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರನ್ನು ಭೇಟಿ ಮಾಡಿದ್ದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.ಯೋಗೇಶ್ವರ್ ಮಾತನಾಡಿ, ನಾನು ಮಂತ್ರಿ ಸ್ಥಾನಕ್ಕಾಗಿ ಮನವಿ ಮಾಡಿಲ್ಲ. ವರಿಷ್ಠರು ಪರಿಷತ್ ಸ್ಥಾನ ನೀಡಿದ್ದಕ್ಕೆ ಸಂತಸ ಹಂಚಿಕೊಂಡೆ ಎಂದರು. ಸಂಪುಟ ವಿಸ್ತರಣೆ ವೇಳೆ ತನಗೆ ಮಂತ್ರಿ ಸ್ಥಾನ ನೀಡಬೇಕು ಎಂದು ವರಿಷ್ಠರಲ್ಲಿ ಯೋಗೇಶ್ವರ್ ತಿಳಿಸಿರುವ ಬಗ್ಗೆ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಸಂಪುಟ ವಿಸ್ತರಣೆ ವೇಳೆ ಮಂತ್ರಿ ಸ್ಥಾನ ಕಳೆದುಕೊಳ್ಳಬಹುದೇನೋ ಎಂಬ ಆತಂಕದಿಂದ ದೆಹಲಿಗೆ ಬಂದಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ವರಿಷ್ಠರ ಭೇಟಿಗೆ ಯತ್ನಿಸಿದ್ದಾರೆ. ಈಡಿಗ ಸಮುದಾಯದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಂತ್ರಿ ಸ್ಥಾನಕ್ಕಾಗಿ ಯತ್ನ ನಡೆಸುತ್ತಿರುವುದರಿಂದ ಅದೇ ಸಮುದಾಯದ ಶ್ರೀನಿವಾಸ ಪೂಜಾರಿ, ಸ್ಥಾನ ಉಳಿಸಿಕೊಳ್ಳಲು ದೆಹಲಿ ನಾಯಕರ ನಿವಾಸಗಳಿಗೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.

ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಿಎಂ ಅವರನ್ನು ಭೇಟಿ ಮಾಡಿದ್ದೆ. ಯೋಗೇಶ್ವರ್ ದೆಹಲಿ ಭೇಟಿ ಹಾಗೂ ಉಳಿದ ಯಾವ ವಿಚಾರವೂ ನನಗೆ ಗೊತ್ತಿಲ್ಲ. ರಾಜ್ಯದಲ್ಲಿ ಒಬ್ಬರು ಮುಖ್ಯಮಂತ್ರಿ ಇದ್ದು, ಅವರೇ ಮೂರು ವರ್ಷ ಮುಂದುವರಿಯುತ್ತಾರೆ. | ಉಮೇಶ್ ಕತ್ತಿ ಮಾಜಿ ಸಚಿವ ರಾಜ್ಯದಲ್ಲಿ ಯಡಿಯೂರಪ್ಪ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಸಚಿವ ರಮೇಶ್ ಜಾರಕಿಹೊಳಿ, ಯೋಗೇಶ್ವರ್ ಬೇರೆ ಬೇರೆ ಕಾರಣಕ್ಕೆ ದೆಹಲಿಯಲ್ಲಿ ನಾಯಕರನ್ನು ಭೇಟಿ ಮಾಡಿದ್ದಾರೆ. ಆ ಭೇಟಿಗೂ ನಾಯಕತ್ವ ಬದಲಾ ವಣೆಗೂ ಸಂಬಂಧವಿಲ್ಲ. ಡಿಸಿಎಂ ಸ್ಥಾನಕ್ಕೆ ದೆಹಲಿಯಲ್ಲಿ ರಮೇಶ್​ಲಾಬಿ ವಿಚಾರ ಗೊತ್ತಿಲ್ಲ. | ಮುರುಗೇಶ ನಿರಾಣಿ ಮಾಜಿ ಸಚಿವ

ನಿಗಮ ಅಧ್ಯಕ್ಷ ಹುದ್ದೆ ನಿರಾಕರಣೆ ಬಿಎಸ್​ವೈ ಮನವೊಲಿಕೆ ಪ್ರಯತ್ನ

ಬೆಂಗಳೂರು: ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಹುದ್ದೆ ಒಲ್ಲೆ ಎನ್ನುತ್ತಿರುವ ಶಾಸಕರ ಜತೆಗೆ ಖುದ್ದು ಮುಖ್ಯಮಂತ್ರಿಗಳೇ ಮಾತನಾಡಿ, ಮನವೊಲಿಕೆ ಮಾಡುವ ಪ್ರಯತ್ನ ಮಾಡಲು ಮುಂದಾಗಿದ್ದಾರೆ. ಶಾಸಕರಿಗಾಗಿ ನೀಡಲಾಗಿದ್ದ 24 ನಿಗಮ- ಮಂಡಳಿ ಹುದ್ದೆಗಳಲ್ಲಿ 4 ಶಾಸಕರ ನೇಮಕಾತಿ ಆದೇಶವನ್ನು ಹಿಂಪಡೆದುಕೊಂಡಿತ್ತು. ಇನ್ನುಳಿದ 20 ಶಾಸಕರಲ್ಲಿ ಈ ತನಕ 17 ಶಾಸಕರು ಮಾತ್ರ ಹುದ್ದೆ ಅಲಂಕರಿಸಿದ್ದಾರೆ. ಹಾಸನ ಕ್ಷೇತ್ರದ ಪ್ರೀತಂಗೌಡ, ಮೂಡಿಗೆರೆಯ ಎಂ.ಪಿ.ಕುಮಾರಸ್ವಾಮಿ, ಸೇಡಂನ ರಾಜಕುಮಾರ್ ಪಾಟೀಲ್ ಹುದ್ದೆ ಬೇಡವೆಂದು ನಿರಾಕರಿಸಿದ್ದಾರೆ. ಈ ಮೂವರೊಂದಿಗೆ ಒಮ್ಮೆ ಮಾತನಾಡಿ, ಮುಂದಿನ ತೀರ್ಮಾನ ತೆಗೆದುಕೊಳ್ಳಲು ಸಿಎಂ ನಿರ್ಧರಿಸಿದ್ದಾರೆ. ಸಿಎಂ ಮಾತಿಗೂ ಶಾಸಕರ ಮಣಿಯದೆ ಇದ್ದರೆ, ಅವರು ಹೇಳುವ ಕಾರ್ಯಕರ್ತರಿಗೆ ಅಥವಾ ಬೇರೆ ಶಾಸಕರಿಗೆ ಹುದ್ದೆ ನೀಡಲು ಸಿಎಂ ಉದ್ದೇಶಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನೊಂದು ವಾರದಲ್ಲಿಯೇ ಈ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net