

ಮೈಸೂರು: ದಂಪತಿಗೆ ವಂಚಿಸಿದ ಆರೋಪದ ಮೇರೆಗೆ ಖಾಸಗಿ ಫೈನಾನ್ಸ್ ಕಂಪನಿಯ ಮ್ಯಾನೇಜರ್ ಸೇರಿದಂತೆ ಮೂವರನ್ನು ಲಕ್ಷ್ಮೀಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಜೆಎಲ್‌ಬಿ ರಸ್ತೆಯಲ್ಲಿನಲ್ಲಿನ ಖಾಸಗಿ ಫೈನಾನ್ಸ್ ಕಂಪನಿಯ ಏರಿಯಾ ಮ್ಯಾನೇಜರ್ ಯೋಗಾನಂದ, ಅಸಿಸ್ಟೆಂಟ್ ಮ್ಯಾನೇಜರ್‌ಬಸವರಾಜು, ಸೇಲ್ಸ್ ಆಫೀಸರ್ ಆನಂದ್ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಂಜನಗೂಡಿನ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖಾ ಕಚೇರಿಯಲ್ಲಿ ಡಿ-ಗ್ರೂಪ್ ನೌಕರರಾಗಿದ್ದ ದಿವಂಗತ ಎಂ.ಸುರೇಶ್ ಮತ್ತು ಅವರ ಪತ್ನಿ ಖಾಸಗಿ ಶಾಲೆಯ ಶಿಕ್ಷಕಿ ಚಂದ್ರಕಲಾ ವಂಚನೆಗೆ ಒಳಗಾದವರು.
ಈ ದಂಪತಿಗಳು ಗಿರಿಯಾ ಭೋವಿ ಪಾಳ್ಯದಲ್ಲಿನ ಮನೆ ಕಟ್ಟಲು ಸಾಲಕ್ಕಾಗಿ ಸದರಿ ವ್ಯಕ್ತಿಗಳನ್ನು ಸಂಪರ್ಕಿಸಿದ್ದರು. ಅದರಂತೆ ಅಗತ್ಯ ದಾಖಲೆಗಳನ್ನು ನೀಡಿದ ಕಾರಣ ಅವರಿಗೆ 16,39,780 ರೂ. ಸಾಲ ಮಂಜೂರಾಗಿದೆ. ಅದರಲ್ಲಿ 1,33,585 ರೂ. ಸುರೇಶ್ ಅವರ ಹೆಸರಿನಲ್ಲಿ ಲೈಫ್ ಇನ್ಸೂರೆನ್ಸ್ ಪಾಲಿಸಿ ಮಾಡಿಸಿ, ನಿವೇಶನವನ್ನು ಸಂಸ್ಥೆಯ ಹೆಸರಿಗೆ ಮಾರ್ಟ್‌ಗೇಜ್ (ಅಡಮಾನ ನೋಂದಣಿ) ಮಾಡಿಸಿ ಕೊಂಡು ಸಾಲದ ಹಣವನ್ನು ನೀಡುವುದಾಗಿ ತಿಳಿಸಿದ್ದಾರೆ. ಸಾಲದ ಹಣವನ್ನೇ ಪಡೆಯದ ಸುರೇಶ್ ಅವರ ಖಾತೆಯಿಂದ ಮೊದಲ ಕಂತಿನ ಇಎಂಐ ಕಟ್ಟಾಗಿದೆ. ಇದರಿಂದ ಗಾಬರಿಯಾದ ಅವರು ಅಸಿಸ್ಟೆಂಟ್ ಮ್ಯಾನೇಜರ್ ಬಸವರಾಜು ಅವರನ್ನು ಸಂಪರ್ಕಿಸಿದ್ದಾರೆ. ಇನ್ನೆರಡು ದಿನದಲ್ಲಿ ಸಾಲದ ಹಣ ನಿಮ್ಮ ಖಾತೆಗೆ ಜಮೆ ಆಗುತ್ತದೆ ಎಂದು ಅವರು ಹೇಳಿ ಸಾಗಾಕಿದ್ದಾರೆ. ಸಾಲದ ಹಣವೂ ಬಂದಿಲ್ಲ. ಇಎಂಐ ಕಟ್ಟಾಗುತ್ತಿದೆ ಎಂಬ ಕಾರಣಕ್ಕೆ ಆಘಾತಗೊಂಡ ಸುರೇಶ್, 2023ರ ಅ. 13ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ‘ತಮ್ಮ ಪತಿ ಮೃತಪಟ್ಟು 3 ತಿಂಗಳಾದರೂ ಅವರ ಹೆಸರಿನಲ್ಲಿ ಲೈಫ್ ಇನ್ಸೂರೆನ್ಸ್ ಮಾಡಿಸಿರುವುದಾಗಿ ಹೇಳುತ್ತಿರುವ ಫೈನಾನ್ಸ್ ಕಂಪನಿಯವರು ಪಾಲಿಸಿಯ ಕಡತವನ್ನೂ ಕೊಡುತ್ತಿಲ್ಲ. ತಮಗೆ ಸಾಲದ ಹಣವನ್ನೂ ನೀಡದೇ ಮಾನಸಿಕ ಕಿರುಕುಳ ನೀಡಿ ಪತಿಯ ಸಾವಿಗೆ ಕಾರಣರಾಗಿದ್ದಾರೆ’ ಎಂದು ಚಂದ್ರಕಲಾ ದೂರು ನೀಡಿದ್ದರು.