

ಶಿವಮೊಗ್ಗ: ಅಕ್ರಮ ಮರಳು ಗಣಿಗಾರಿಕೆ ಸ್ಥಳದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಕರ್ತವ್ಯಕ್ಕೆ ಅಡಚಣೆ ಮಾಡಿ, ನಿಂಧಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಜ್ಞಾನಿ ಜ್ಯೋತಿ ನೀಡಿದ ದೂರಿನ ಅನ್ವಯ ಮೂವರನ್ನು ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇದರೊಂದಿಗೆ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಪುತ್ರ ಬಸವೇಶ್ ಮಹಿಳಾ ಅಧಿಕಾರಿಗೆ ಅಶ್ಲೀಲ ಪದ ಬಳಕೆ ಮೂಲಕ ಬೆದರಿಕೆ ಹಾಕಿದ್ದಾರೆ ಎಂಬ ಪ್ರಕರಣ ಮತ್ತೊಂದು ತಿರುವು ಪಡೆದಿದೆ.
ಚನ್ನಗಿರಿ ತಾಲೂಕು, ಮಾವಿನಕಟ್ಟೆಯ ರವಿ (30), ಹಾಸನ ಜಿಲ್ಲೆ ಅರಕಲಗೋಡಿನ ವರುಣ್ (34) ಹಾಗೂ ಭದ್ರಾವತಿ ತಾಲೂಕು ಸುರೇಂದ್ರ ಗೌಡ ಕ್ಯಾಂಪನ್ ಅಜೇಯ್(28) ಬಂಧಿತ ಆರೋಪಿಗಳು.
ಫೆ.9ರ ಮಧ್ಯರಾತ್ರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಜ್ಞಾನಿ ಜ್ಯೋತಿ ಭದ್ರಾವತಿ ತಾಲೂಕು ಸೀಗೆಬಾಗಿ ಬಳಿ ಭದ್ರಾ ನದಿಯಲ್ಲಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಲ್ಲಿದ್ದ ವ್ಯಕ್ತಿಯೊಬ್ಬ ಜ್ಯೋತಿ ಅವರಿಗೆ ಫೋನ್ ನೀಡಿ, ಇವರೊಂದಿಗೆ ಮಾತನಾಡಿದ ಎಂದಿದ್ದ. ಫೋನ್ ಎತ್ತಿಕೊಂಡ ಮಹಿಳಾ ಅಧಿಕಾರಿಗೆ ಅತ್ತ ಕಡೆಯಿಂದ ಅವಾಚ್ಯ ಶಬ್ಧಗಳನ್ನು ಬಳಸಿ ನಿಂದಿಸಲಾಗಿತ್ತು.
ಘಟನೆ ನಡೆದ ಎರಡು ದಿನಗಳ ಬಳಿಕ ಮಹಿಳಾ ಅಧಿಕಾರಿ ದೂರು ನೀಡಿದ್ದು ಅಂತೂ ಎಫ್‌ಐಆರ್ ದಾಖಲಾಗಿದೆ. ಅಧಿಕಾರಿ ನೀಡಿದ್ದ ದೂರಿನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಆರರಿಂದ ಏಳು ಮಂದಿ ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಫೋನ್‌ನಲ್ಲಿ ವ್ಯಕ್ತಿಯೊಬ್ಬರು ಮಾತನಾಡಿ ಅಶ್ಲೀಲ ಪದ ಬಳಸಿ ಬೈದಿದ್ದಾರೆ. ನನಗೆ ಯಾರ ಪರಿಚಯವೂ ಇಲ್ಲ ಎಂದಷ್ಟೇ ತಿಳಿಸಿದ್ದಾರೆ.