ಬೇರಿಕೆ ಪೊಲೀಸರಿಂದ ಮೂವರ ಸೆರೆ

27 05 2025_BNG_RURAL_PAGE_2
ಬೇರಿಕೆ ಬಳಿಯ ತೆಂಗಿನ ತೋಟದಲ್ಲಿ ಆಯೋಜನೆಗೊಳ್ಳುತ್ತಿದ್ದ ಪಾರ್ಟಿ ಮತ್ತು ನೃತ್ಯ ಪ್ರದರ್ಶನಗಳಿಗೆ ಡ್ರಗ್ಸ್​ ಸರಬರಾಜು ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಪೊಲೀಸರು ಬಂಧಿಸಿರುವುದು.
Published on

ಹೊಸೂರು : ಇಲ್ಲಿನ ಬೇರಿಕೆ ಬಳಿಯ ತೆಂಗಿನ ತೋಟದಲ್ಲಿ ಆಯೋಜನೆಗೊಳ್ಳುತ್ತಿದ್ದ ಪಾರ್ಟಿ ಮತ್ತು ನೃತ್ಯ ಪ್ರದರ್ಶನಗಳಿಗೆ ಡ್ರಗ್ಸ್​ ಸರಬರಾಜು ಮಾಡುತ್ತಿದ್ದ ಆರೋಪದಲ್ಲಿ ಮೂವರನ್ನು ಬೇರಿಕೆ ಠಾಣೆ ಪೊಲೀಸರು ಇತ್ತೀಚೆಗೆ ಬಂಧಿಸಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಬಾಲಾಜಿ (36), ಗೋವಾ ಮೂಲದ ಇಗ್ನೇಷಿಯಸ್​ ಲಾರೆನ್ಸ್​ ಕಾಮಿ ಲೋ (47), ಬಿಹಾರ ಮೂಲದ ರಜನೀಶ್​ ಕುಮಾರ್​(42) ಬಂಧಿತರು.

ತಮಿಳುನಾಡು&ಕರ್ನಾಟಕ ಗಡಿಯಲ್ಲಿನ ಕಕ್ಕನೂರು ಚೆಕ್​ಪೋಸ್ಟ್​ನಲ್ಲಿ ಮೇ 24ರ ರಾತ್ರಿ ಬೇರಿಕೆ ಠಾಣೆ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದರು. ಈ ವೇಳೆ ಕರ್ನಾಟಕದಿಂದ ತಮಿಳುನಾಡು ಗಡಿ ಪ್ರವೇಶಿಸಿದ ಕಾರನ್ನು ತಡೆದರೂ ಚಾಲಕ ಕಾರು ನಿಲ್ಲಿಸದೆ ತೆರಳಿದ್ದ. ಬಳಿಕ ಪೊಲೀಸರು ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದು, ಈ ವೇಳೆ ಬೇರಿಕೆ ಸಮೀಪದ ಮುತ್ತುಕುರುಕ್ಕಿ ಗ್ರಾಮದ ತೆಂಗಿನ ತೋಟಕ್ಕೆ ಕಾರು ನುಗ್ಗಿತ್ತು. ಪೊಲೀಸರು ತೋಟದೊಳಗೆ ಹೋದಾಗ ಹೆಚ್ಚಿನ ಸಂಖ್ಯೆಯಲ್ಲಿ ಯುವಕ&ಯುವತಿಯರು ಕುಡಿದ ಅಮಲಿನಲ್ಲಿ ಡಿಜೆ ಸದ್ದಿಗೆ ಅರೆಬೆತ್ತಲೆಯಾಗಿ ನೃತ್ಯ ಮಾಡುತ್ತಿದ್ದರು.

ಯುವಕ&ಯುವತಿಯರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದು, ಬಳಿಕ ತೋಟವನ್ನು ಶೋಧ ನಡೆಸಿದಾಗ ದುಬಾರಿ ಮದ್ಯ, ಗಾಂಜಾ ಸೇರಿ ಮಾದಕ ವಸ್ತುಗಳು ಸಿಕ್ಕಿವೆ. ಇದೇ ವೇಳೆ ಚೆಕ್​ಪೋಸ್ಟ್​ನಿಂದ ತಪ್ಪಿಸಿಕೊಂಡು ಬಂದಿದ್ದವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.

2 ಲಕ್ಷ ರೂ.ಗೆ ತೋಟ ಗುತ್ತಿಗೆ : ತಟ್ಟನಪಳ್ಳಿಯ ಭಕ್ತವತ್ಸಲಂ (60) ಎಂಬ ರೈತ ಬೆಂಗಳೂರಿನ ಕೋರಮಂಗಲದ ಬಾಲಾಜಿಗೆ 4 ಎಕರೆ ತೋಟವನ್ನು ವರ್ಷಕ್ಕೆ 2 ಲ ರೂ.ನಂತೆ ಗುತ್ತಿಗೆ ನೀಡಿದ್ದರು. ಬಾಲಾಜಿ ಹಾಗೂ ಗೋವಾದ ಇಗ್ನೇಷಿಯಸ್​ ಲಾರೆನ್ಸ್​ ಕಾಮಿಲೋ ಸೇರಿ ತೋಟದ ಮನೆ ನಿರ್ಮಿಸಿ, ಅಲ್ಲಿಯೇ ರಾತ್ರಿ ಪಾರ್ಟಿ ಆಯೋಜಿಸುತ್ತಿದ್ದರು. ಆನ್​ಲೈನ್​ ಬುಕ್ಕಿಂಗ್​ ಮೂಲಕ ಪ್ರವೇಶ ಪಡೆದವರಿಗೆ ರಾತ್ರಿಯ ಪಾರ್ಟಿಗಳಲ್ಲಿ ನೃತ್ಯ ಪ್ರದರ್ಶನ ಹಾಗೂ ದುಬಾರಿ ಮದ್ಯ ಮತ್ತು ಮಾದಕ ವಸ್ತು ಪೂರೈಸಲಾಗುತ್ತಿತ್ತು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net