

ಗಂಗೊಳ್ಳಿ: ಮನೆ ಮೇಲೆ ಭಾನುವಾರ ತಡರಾತ್ರಿ ರಾತ್ರಿ ಸೋಡಾ ಬಾಟಲಿ ತೂರಾಟ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ದಾಕುಹಿತ್ಲು ನಿವಾಸಿಗಳಾದ ಧನುಷ್ ಖಾರ್ವಿ (24), ಕಿರಣ್ ಖಾರ್ವಿ (23) ಹಾಗೂ ನಿಖಿಲ್ ಖಾರ್ವಿ (23) ಬಂಧಿತರು.
ಮದ್ಯ ಸೇವಿಸಿ ಬೈಕಿನಲ್ಲಿ ಬಂದ ಯುವಕರು ಗಂಗೊಳ್ಳಿ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಮನೆಯೊಂದರ ಮೇಲೆ ಬಾಟಲಿ ಎಸೆದಿದ್ದು, ಕಿಟಕಿಯ ಗಾಜು ಹುಡಿಯಾಗಿದೆ ಎಂದು ಆರೋಪಿಸಲಾಗಿದೆ. ಬಾಟಲಿ ಎಸೆದ ಧನುಷ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದರು.
ಈ ಪೈಕಿ ಕಿರಣ್ ಎಂಬಾತನನ್ನು ಸೋಮವಾರ ಬೆಳಗ್ಗೆ, ನಿಖಿಲ್‌ನನ್ನು ಸಾಯಂಕಾಲ ಬಂಧಿಸಲಾಗಿದೆ. ಐದು ವರ್ಷ ಹಿಂದೆ ಇದೇ ಮನೆ ಮೇಲೆ ಕಲ್ಲು ತೂರಾಟ ನಡೆದಿತ್ತು. ಮನೆಯ ವಠಾರದಲ್ಲಿ ನಿಲ್ಲಿಸಿದ್ದ ಸ್ಕೂಟರ್‌ಗೆ ಬೆಂಕಿ ಹಚ್ಚುವ ಪ್ರಯತ್ನ ಕೂಡ ನಡೆದಿತ್ತು. ಸೂಕ್ಷ್ಮ ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.
ಕುಂದಾಪುರ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ಭೀಮಾಶಂಕರ್ ಎಸ್. ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ. ಗಂಗೊಳ್ಳಿಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕದಡುವ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಜನರು ಶಾಂತಿ ಸೌಹಾರ್ದತೆಯಿಂದ ಜೀವನ ನಡೆಸಲು ಪೊಲೀಸ್ ಇಲಾಖೆ ಎಲ್ಲ ರೀತಿಯ ಕ್ರಮಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.