ಅಪಘಾತದಲ್ಲಿ ಮೂವರು ಗಂಭೀರ

FotoJet (1)
Published on

ಗಾಂಜಾ ಮತ್ತಿನಲ್ಲಿ ವೇಗವಾಗಿ ಕಾರು ಚಾಲನೆ ಬೈಕ್ ಜಖಂ

ಆನೇಕಲ್ : ಗಾಂಜಾ ಹಾಗೂ ಕುಡಿದ ಮತ್ತಿನಲ್ಲಿ ವೇಗವಾಗಿ ಕಾರು ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರ ಸ್ಥಿತಿ ಗಂಭೀರವಾಗಿದೆ.

ಆನೇಕಲ್ ಹಾಗೂ ಚಂದಾಪುರ ಮುಖ್ಯ ರಸ್ತೆಯ ಆರ್‌ಟಿಒ ಕಚೇರಿ ಎದುರು ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಇದ್ದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಬೈಕಿನಲ್ಲಿದ್ದ ಆನೇಕಲ್ ತಾಲೂಕಿನ ಶೆಟ್ಟಿಹಳ್ಳಿಯ ರಾಹುಲ್(22) ಮಿಥುನ್(22) ಹಾಗೂ ಲೋಚನ್(21) ಗಂಭೀರ ಗಾಯಗೊಂಡಿದ್ದಾರೆ.

ವೇಗವಾಗಿ ಕಾರು ಚಲಾಯಿಸಿ ಅಪಘಾತ ಮಾಡಿದ ಕಾರು ಚಾಲಕ ದಕ್ಷಿಣ ಬಾಬಾ ಹಾಗೂ ಯಾಸಿನ್ ಎಂಬಾತನನ್ನು ಸೂರ್ಯನಗರ ಪೊಲೀಸರು ವಶಕ್ಕೆ ಪಡೆದಿದ್ದು, ಪುರುಷಾರ್ಥ ಸಿಂಗ್ ಎಂಬಾತ ಅಪಘಾತ ಬಳಿಕ ಪರಾರಿಯಾಗಿದ್ದಾನೆ.

ಗಾಯಾಳುಗಳಿಗೆ ಕೇಂದ್ರ ಮಾಜಿ ಸಚಿವ ನೆರವು: ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದವರನ್ನು ಆಸ್ಪತ್ರೆಗೆ ಸೇರಿಸಲು ಆಂಬುಲೆನ್ಸ್‌ಗೆ ಕರೆ ಮಾಡಿದರೂ ಅರ್ಧ ಗಂಟೆಯಾದರೂ ಬಂದಿರಲಿಲ್ಲ. ಈ ವೇಳೆಗೆ ಆನೇಕಲ್‌ನಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ಕೇಂದ್ರದ ಮಾಜಿ ಸಚಿವ ಎ ನಾರಾಯಣಸ್ವಾಮಿ, ರಕ್ತದ ಮಡುವಿನಲ್ಲಿ ಬಿದ್ದು ಕಾಲು ಮುರಿದುಕೊಂಡು ಒದ್ದಾಡುತ್ತಿದ್ದ ಮೂವರನ್ನು ಕಾರಿನಲ್ಲೇ ಚಂದಾಪುರದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ, ಮನೆಯವರಿಗೆ ಕರೆ ಮಾಡಿ ಮಾಹಿತಿ ತಿಳಿಸಿದರು.

ಕಾರು ವಶ: ಅಪಘಾತ ಮಾಡಿ ಖಾಲಿ ಬಡಾವಣೆಯಲ್ಲಿ ನಿಲ್ಲಿಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಕಾರಿನಲ್ಲಿ ಗಾಂಜಾ ಸೇವನೆ ಮಾಡಲು ಬಳಸಿದ ವಸ್ತುಗಳು ಹಾಗೂ ಮದ್ಯ ಸೇವನೆ ಮಾಡಲು ಬಳಸಿದ ಬಾಟಲ್ ಸಿಕ್ಕಿವೆ.

ಹಾಗೆಯೇ, ಗೌರ್ನಮೆಂಟ್ ಆಫ್ ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಪಂಚಾಯಿತಿ ವೈಯ್ಸ ಚೇರ್ಮನ್ ಶೇಕ್ ರಶೀದ್ ಎಂಬುವವರ ಐಡಿ ಕಾರ್ಡ್ ಇದ್ದು, ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಲಾಗಿದೆ. ಪ್ರಕರಣ ಸಂಬಂಧ ಸೂರ್ಯ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net