

ವಿಜಯನಗರ: ಜಿಲ್ಲೆಯ ಮರಿಯಮ್ಮನಹಳ್ಳಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂವರು ಕುಖ್ಯಾತ ಅಂತರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯ್ ಭಲಭೀಮ್, ಗಣೇಶ್ ಪಾಂಡುರಂಗ ನಕಾತೆ, ಪ್ರಶಾಂತ್ ಪಾಂಡುರಂಗ ನಕಾತೆ ಬಂಧಿತ ಆರೋಪಿಗಳು. ಮೂವರು ಮಹಾರಾಷ್ಟ್ರ ಮೂಲದ ಖೆಡ್ ಜಿಲ್ಲೆಯವರೆಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ: ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ವ್ಯಾಪ್ತಿಯಲ್ಲಿ ಇದೇ ತಿಂಗಳ 19 ರಂದು 30 ಲಕ್ಷ ರೂ. ಬೆಲೆ ಬಾಳುವ ಎರಡು ಟಿಪ್ಪರ್ ಲಾರಿ ಕಳ್ಳತನ ಆಗಿತ್ತು. ಈ ಸಂಬಂಧ ಮರಿಯಮ್ಮನಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಕಳ್ಳತನ ಕೇಸ್ ದಾಖಲಾಗ್ತಿದ್ದಂತೆ ಅಲರ್ಟ್ ಆಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೇವಲ ಐದೇ ದಿನದಲ್ಲಿ ಮೂವರು ಆರೋಪಿಗಳನ್ನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಮೂವರು ಆರೋಪಿಗಳಿಂದ 30 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಎರಡು ಟಿಪ್ಪರ್ ಲಾರಿ ವಶಕ್ಕೆ ಪಡೆಯಲಾಗಿದೆ.