ಸೈಫುದ್ದೀನ್ ಹತ್ಯೆ ಪ್ರಕರಣ, ಆರೋಪಿಗಳು ಕಸ್ಟಡಿಗೆ

SP
Published on

ಎಸ್ಪಿ ಹರಿರಾಂ ಶಂಕರ್​ ಮಾಹಿತಿ

ಉಡುಪಿ-ಮಂಗಳೂರು ಜಿಲ್ಲೆಯಲ್ಲಿ ಸಾರಿಗೆ ಸೇವೆ ನೀಡುತ್ತಿದ್ದ ಎಕೆಎಂಎಸ್​ ಖಾಸಗಿ ಬಸ್​ ಸಂಸ್ಥೆಯ ಮಾಲೀಕ ಸೈಫುದ್ದೀನ್​ ಅಲಿಯಾಸ್​ ಸೈಫ್​ (52) ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಮುಂದುವರಿದಿದೆ. ಬಂಧಿತ ಮೂವರನ್ನು ವಿಚಾರಣೆಗಾಗಿ 6 ದಿನಗಳ ಕಾಲ ಕಸ್ಟಡಿಗೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹರಿರಾಂ ಶಂಕರ್​ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ಸುದ್ದಿಜಾಲ ಉಡುಪಿ

ಬೇರೆ ಕೊಲೆ ಪ್ರಕರಣದಲ್ಲಿ ಭಾಗಿ

ಸೈಫುದ್ದೀನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯ ವೇಳೆ ಕೆಲವೊಂದು ವಿಚಾರ ತಿಳಿದು ಬಂದಿದೆ. ಹಿರಿಯಡ್ಕ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ 2020ರಲ್ಲಿ ವಸಿಷ್ಠ ಎಂಬವರ ಹತ್ಯೆ ಪ್ರಕರಣದಲ್ಲಿ ಇದೀಗ ಬಂಧನಕ್ಕೊಳಗಾಗಿರುವ ಮೂವರ ಪೈಕಿ ಮಹಮ್ಮದ್​ ಶರೀಫ್​ (37) ಹಾಗೂ ಮಂಗಳೂರಿನ ಅಬ್ದುಲ್​ ಶುಕುರ್​ (43) ಎಂಬವರು ಮತ್ತು ಮೊನ್ನೆ ಹತ್ಯೆಯಾಗಿರುವ ಸೈಫುದ್ದೀನ್​ ಪ್ರಮುಖ ಆರೋಪಿಗಳಾಗಿದ್ದರು. ಬಂಧನಕ್ಕೊಳಗಾಗಿರುವ ಇನ್ನೋರ್ವ ಮಹಮ್ಮದ್​ ಫೈಸಲ್​ ಖಾನ್​ (27) ಎಂಬಾತ ಸೈಫುದ್ದೀನ್ ಅವರ ಎಲ್ಲ ಬಸ್​ಗಳ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದು, ಆತನ ಬಲಗೈ ಬಂಟನಂತೆ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭಿಸಿದೆ ಎಂದರು.

ಕಾರಿನಲ್ಲಿ ಕರೆದೊಯ್ದ ಆಪ್ತ

ಸೈಫುದ್ದೀನ್​ ಅವರನ್ನು ಹತ್ಯೆ ಮಾಡುವ ಮೊದಲು ಆಪ್ತ ಮಹಮ್ಮದ್​ ಫೈಸಲ್​ ಖಾನ್​, ಮಣಿಪಾಲದಲ್ಲಿರುವ ಸೈಫುದ್ದೀನ್ ಮನೆಯಿಂದ ಅವರನ್ನು ಕಾರಿನ ಮೂಲಕ ಕೊಡವೂರಿನಲ್ಲಿರುವ ಇನ್ನೊಂದು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಜತೆಯಲ್ಲಿ ಇನ್ನಿಬ್ಬರು ಆರೋಪಿಗಳೂ ಇದ್ದರು. ಸಾಲ್ಮರದ ನಾಗಬನದ ಬಳಿ ಇರುವ ಮನೆಯೊಳಗೆ ಸೈಫುದ್ದೀನ್ ತೆರಳುತ್ತಿದ್ದಾಗ ಮಹಮ್ಮದ್​ ಫೈಸಲ್​ ಖಾನ್​ ಹಾಗೂ ಇನ್ನಿಬ್ಬರು ರಾಡ್​ ಹಾಗೂ ತಲವಾರ್​ನಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್ಪಿ ತಿಳಿಸಿದರು.

ಪೂರ್ವನಿಯೋಜಿತ ಮರ್ಡರ್​ ಸಾಧ್ಯತೆ

ಎಕೆಂಎಂಎಸ್​ ಬಸ್​ ಮಾಲೀಕ ಸೈಫುದ್ದೀನ್​, ಉಡುಪಿ ಹಾಗೂ ಹಿರಿಯಡ್ಕ ಠಾಣೆಯ ರೌಡಿಶೀಟರ್​ ಆಗಿದ್ದಾರೆ. ಅವರ ವಿರುದ್ಧ 18ಕ್ಕೂ ಹೆಚ್ಚು ಕ್ರಿಮಿನಲ್​ ಪ್ರಕರಣ ದಾಖಲಾಗಿದೆ. ಅಲ್ಲದೆ, ಎರಡು ಕೊಲೆ ಪ್ರಕರಣಗಳ ಆರೋಪಿಯೂ ಆಗಿದ್ದಾರೆ. ಇದೀಗ ಅವರ ಹತ್ಯೆಯನ್ನು ಈ ಮೂವರು ವೈಯಕ್ತಿಕ ಕಾರಣದಿಂದ ಮಾಡಿದ್ದಾರಾ ಅಥವಾ ಬೇರೆಯವರ ಪ್ರೇರಣೆಯಿಂದ ಇವರು ಹತ್ಯೆ ಮಾಡಿದ್ದಾರಾ ಎಂಬ ಕುರಿತು ತನಿಖೆ ಮುಂದುವರಿದಿದೆ. ಸೈಫುದ್ದೀನ್ ಅವರನ್ನು ಒಂದು ಮನೆಯಿಂದ ಇನ್ನೊಂದು ಮನೆಗೆ ಕರೆದುಕೊಂಡು ಹೋಗಿರುವುದು, ಅದಕ್ಕೂ ಮೊದಲು ಅವರಿಗಾಗಿ ಮಣಿಪಾಲದ ಮನೆಯಲ್ಲಿ ಕಾಯುವುದು ನಡೆದಿದೆ. ಹೀಗಾಗಿ ಅವರ ಹತ್ಯೆ ವೈಯಕ್ತಿಕ ಸಿಟ್ಟಿನಿಂದ ನಡೆದಿಲ್ಲ. ಅದೊಂದು ಪೂರ್ವನಿಯೋಜಿತ ಮರ್ಡರ್​ ಎನ್ನುವುದೂ ಸಹ ಪೊಲೀಸ್​ ತನಿಖೆಯ ವೇಳೆ ತಿಳಿದುಬಂದಿದೆ. ಇದಲ್ಲದೆ, ಆರೋಪಿಗಳಿಗೆ ಯಾರಾದರೂ ಹಣಕಾಸಿನ ನೆರವು ನೀಡಿದ್ದಾರಾ? ಅಥವಾ ಅವರಿಂದ ಬೇರೆ ಯಾರಾದರೂ ದಾಳಿ ಮಾಡಿಸಿದ್ದಾರಾ ಎಂಬ ಕುರಿತು ತನಿಖೆ ಮಾಡುತ್ತಿದ್ದೇವೆ ಎಂದು ಎಸ್ಪಿ ತಿಳಿಸಿದರು.

ಸೈಫುದ್ದೀನ್​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಸ್ವಹಿತಾಸಕ್ತಿಯಿಂದ ಸುದ್ದಿ ಬಿತ್ತರಿಸಲಾಗುತ್ತಿದೆ. ಅದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗಬಹುದು. ಜನರಿಂದ ಗಾಳಿ ಸುದ್ದಿಯ ತನಿಖೆ ಬೇಡ. ಆ ಕಾರ್ಯ ನಾವು (ಪೊಲೀಸ್​) ಮಾಡುತ್ತೇವೆ. | ಹರಿರಾಂ ಶಂಕರ್​. ಜಿಲ್ಲಾ ಪೊಲೀಸ್​ ವರಿಷ್ಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net