ಮೈಸೂರು ವಿಶ್ವವಿದ್ಯಾಲಯದ ಪ್ರತಿಷ್ಠೆಗೆ ಧಕ್ಕೆ: ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಕಳವಳ

dr. m.c. sudhakara
Published on

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪ್ರತಿಷ್ಠೆಗೆ ಧಕ್ಕೆ ಬಂದಿದೆ ಎಂದು ಸಮಕುಲಾಧಿಪತಿಯೂ ಆದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಕಳವಳ ವ್ಯಕ್ತಪಡಿಸಿದರು.


ಮೈಸೂರು ವಿಶ್ವವಿದ್ಯಾಲಯದ 104ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪನೆ ಮಾಡಿದ ಮೈಸೂರು ವಿವಿ ರಾಜ್ಯದ ಮೊದಲ ವಿಶ್ವವಿದ್ಯಾಲಯ. ಆದರೀಗ ಈ ಸಂಸ್ಥೆಗೆ ಧಕ್ಕೆ ತರುವ ಕೆಲಸಗಳಾಗಿವೆ. ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸುಧಾರಣೆಗೆ ಕ್ರಮ ವಹಿಸಲಾಗುವುದು. ಮತ್ತೆ ಸದೃಢ ವಿಶ್ವವಿದ್ಯಾಲಯವಾಗಿ ಮರು ರೂಪಿಸಲಾಗುವುದು ಎಂದು ಭರವಸೆ ನೀಡಿದರು.


ರಾಜ್ಯದ ಉನ್ನತ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ತರುವ ಪ್ರಯತ್ನಗಳು ನಡೆದಿವೆ. 3 ವರ್ಷದ ಪದವಿ ಕೋರ್ಸ್‌ಗಳಲ್ಲಿ ಕೊನೆಯ ವರ್ಷ ಕೌಶಲಾಧಾರಿತ ತರಬೇತಿ ನೀಡಲು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಜಾರಿಗೆ ಆಲೋಚಿಸಲಾಗಿದೆ.

ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಮಾಸಿಕವಾಗಿ ಅಂದಾಜು 17 ಸಾವಿರ ರೂ. ವರೆಗೂ ಭತ್ಯೆ ನೀಡಲಾಗುವುದು. ಐಎಎಸ್ ಅಧಿಕಾರಿಗಳ ತಂಡ ಸ್ಥಾಪನೆ ಮಾಡಿಕೊಂಡಿರುವ ‘ಕ್ರಿಸ್’ ಸಂಸ್ಥೆಯೊಂದಿಗೆ ಈ ವಿಚಾರದ ಕುರಿತು ಮಾತುಕತೆ ಮಾಡಲಾಗಿದೆ ಎಂದರು.


ಅಮೆರಿಕದ ರಮೇಶ್ ವಾಗ್ವನಿ ಫೌಂಡೇಷನ್ ಜತೆ 3 ಬಿಲಿಯನ್ ಡಾಲರ್ ಮೊತ್ತದ ಯೋಜನೆಗೆ ಒಡಂಬಡಿಕೆಗೆ ಮಾಡಿಕೊಳ್ಳಲಾಗಿದೆ. ಇದರಡಿ ಎಲ್ಲ ವಿಶ್ವವಿದ್ಯಾಲಯಗಳ ಬೋಧಕರು ಹಾಗೂ ವಿದ್ಯಾರ್ಥಿಗಳಿಗೆ ವೃತ್ತಿಪರತೆ ಬಗ್ಗೆ ತರಬೇತಿ ಕೊಡಲಾಗುವುದು.

ಆರಂಭದಲ್ಲಿ ಬೆಂಗಳೂರಿನ ಆರ್‌ಸಿ ಕಾಲೇಜಿನಲ್ಲಿ ಇದು ಶುರುವಾಗಲಿದ್ದು, ನಂತರ ಮೈಸೂರು, ಮಂಗಳೂರು ವಿವಿಗೂ ವಿಸ್ತರಣೆ ಮಾಡಲಾಗುತ್ತದೆ. ಇಲ್ಲಿ ಸಾಧಕ-ಬಾಧಕಗಳನ್ನು ನೋಡಿ ಮುಂದೆ ಕಲಬುರಗಿ, ಧಾರವಾಡ, ಶಿವಮೊಗ್ಗಕ್ಕೂ ವಿಸ್ತರಣೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net