ಕರೊನಾ ನಿಯಮ ಪಾಲನೆಗೆ ನಿಮ್ಮಲ್ಲಿರಲಿ ಈ 'ಸೂತ್ರ'; ಥ್ರೆಡ್​ ಫಾರ್​ ನೇಷನ್ ಅಭಿಯಾನ ಆರಂಭಿಸಿದ ಇನ್​ಸ್ಪೆಕ್ಟರ್​

Feature
Published on

ಬೆಂಗಳೂರು: ಕರೊನಾ ಸೋಂಕನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಹಲವರು ತಮ್ಮದೇ ಆದ ರೀತಿಯಲ್ಲಿ ಏನಾದರೂ ಒಂದು ಪ್ರಯತ್ನವನ್ನು ಮಾಡುತ್ತಲೇ ಇದ್ದಾರೆ. ಅದಾಗ್ಯೂ ಕರೊನಾ ನಿಯಂತ್ರಣಕ್ಕೆ ಅಗತ್ಯವಾಗಿ ಅನುಸರಿಸಬೇಕಾದ ಕೋವಿಡ್​-19 ಮಾರ್ಗಸೂಚಿಗಳ ಪಾಲನೆ ಆಗುತ್ತಿಲ್ಲ. ಇದನ್ನು ಮನಗಂಡ ಪೊಲೀಸ್ ಇನ್​ಸ್ಪೆಕ್ಟರ್​ ಒಬ್ಬರು ಅಭಿಯಾನವೊಂದನ್ನೇ ಆರಂಭಿಸಿದ್ದಾರೆ.

ಯಾವುದೇ ಸಮಸ್ಯೆ ಪರಿಹಾರಕ್ಕೆ ಒಂದು ಸುಲಭದ ಸೂತ್ರವಿದ್ದೇ ಇರುತ್ತದೆ. ಹಾಗೇ ಕೋವಿಡ್ ನಿಯಮ ಪಾಲನೆ ಆಗುತ್ತಿಲ್ಲ ಎಂಬ ಸಮಸ್ಯೆಯನ್ನು ನಿವಾರಿಸಲು ಕೂಡ ಒಂದು ಸೂತ್ರವನ್ನು ಹೇಳಿದ್ದಾರೆ ಬೆಂಗಳೂರಿನ ಪೊಲೀಸ್​ ಇನ್​ಸ್ಪೆಕ್ಟರ್​ ಎಲ್​.ವೈ. ರಾಜೇಶ್​. ಯಾವುದಾದರೂ ಸಮಸ್ಯೆಯಿಂದ ಕೂದಲೆಳೆಯ ಅಂತರದಲ್ಲಿ ಪಾರಾದರು ಎಂಬಂತೆ ಇವರೂ ಕರೊನಾ ಸೋಂಕಿನಿಂದ ಪಾರಾಗುವ ಒಂದು ಎಳೆಯನ್ನು ತಿಳಿಸಿದ್ದಾರೆ.

ಕರೊನಾದಿಂದಾಗಿ ಜನರ ಜೀವ-ಜೀವನ ಎರಡೂ ಸಂಕಷ್ಟಕ್ಕೆ ಸಿಲುಕಿದೆ. ಕರೊನಾ ಪೂರ್ತಿಯಾಗಿ ತೊಲಗುವವರೆಗೂ ಈ ಸಂಕಷ್ಟ ತಪ್ಪಿದಲ್ಲ. ಕರೊನಾ ಸೋಂಕನ್ನು ಪೂರ್ತಿಯಾಗಿ ತೊಲಗಿಸಬೇಕೆಂದರೆ ಕೋವಿಡ್ ನಿಯಮವನ್ನು ಸರಿಯಾಗಿ ಪಾಲನೆ ಮಾಡಬೇಕು. ಮಾಸ್ಕ್​ ಧರಿಸುವುದು, ದೈಹಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಸುವುದು ಮುಂತಾದ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಇದು ಸರಿಯಾಗಿ ಪಾಲನೆ ಆಗಬೇಕೆಂದರೆ ನಮಗೆ ಇದು ಪದೇಪದೆ ನೆನಪಾಗುತ್ತಿರಬೇಕು. ಹಾಗೆ ನೆನಪಾಗಲಿ ಎಂದೇ ನಾನು ಈ ದಾರ (ಸೂತ್ರ) ಕಟ್ಟಿಕೊಳ್ಳುತ್ತಿದ್ದೇನೆ. ಕರೊನಾ ಪೂರ್ತಿಯಾಗಿ ತೊಲಗುವವರೆಗೂ ಹೀಗೆ ದಾರವನ್ನು ಕಟ್ಟಿಕೊಳ್ಳುತ್ತಿರುತ್ತೇನೆ. ನೀವೂ ಇದನ್ನು ಅನುಸರಿಸಿ, ಮತ್ತೆ ಮೂವರಿಗೆ ತಿಳಿಸುವ ಮೂಲಕ ಅಭಿಯಾನ ಮುಂದುವರಿಸಿ ಎಂದಿರುವ ಅವರು ಈ ಅಭಿಯಾನವನ್ನು ಥ್ರೆಡ್ ಫಾರ್ ನೇಷನ್ ಎಂಬ ಹೆಸರಲ್ಲಿ ಆರಂಭಿಸಿದ್ದಾರೆ. ಅವರ ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದ್ದು, ನಟರಾದ ಕಿಚ್ಚ ಸುದೀಪ್, ವಸಿಷ್ಠ ಸಿಂಹ, ನಟಿ ಪಾರೂಲ್ ಯಾದವ್ ಮುಂತಾದವರು ಬೆಂಬಲ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net