ಊರು ಸೇರಿದರು ಸಾವಿರಾರು ಕಾರ್ಮಿಕರು

karmika
Published on

ಉಡುಪಿ/ಪುತ್ತೂರು: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವಿವಿಧ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದ 2,800ಕ್ಕೂ ಅಧಿಕ ವಲಸೆ ಕೂಲಿಕಾರ್ಮಿಕರನ್ನು ಜಿಲ್ಲಾಡಳಿತಗಳು ವೈದ್ಯಕೀಯ ತಪಾಸಣೆ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಅವರ ಸ್ವಂತ ಊರಿಗೆ ಕಳುಹಿಸಿವೆ.

ಗದಗ, ಬಾಗಲಕೋಟೆ, ಕೊಪ್ಪಳ, ಬಿಜಾಪುರ, ದಾವಣಗೆರೆ, ಶಿವಮೊಗ್ಗ, ಧಾರವಾಡ, ಹಾವೇರಿ, ಬೆಳಗಾವಿ, ಉತ್ತರ ಕನ್ನಡ, ರಾಯಚೂರು, ಚಿತ್ರದುರ್ಗ, ಹಾಸನ, ಬಳ್ಳಾರಿ, ಬೆಂಗಳೂರಿಗೆ ಬಸ್‌ಗಳು ಪ್ರಯಾಣ ಬೆಳೆಸಿವೆ.

ಉಡುಪಿ ಜಿಲ್ಲೆಯಲ್ಲಿ ಆದಿಉಡುಪಿ, ಕಾಪು, ಬ್ರಹ್ಮಾವರ, ಬಾರಕೂರು ಮತ್ತು ಕುಂದಾಪುರದಲ್ಲಿ ನಿರಾಶ್ರಿತರ ಶಿಬಿರ ಸ್ಥಾಪಿಸಲಾಗಿದ್ದು, 540 ಕಾರ್ಮಿಕರನ್ನು 20 ಬಸ್‌ಗಳಲ್ಲಿ ಕಳುಹಿಸಲಾಗಿದೆ. ಮಧ್ಯಾಹ್ನ ಊಟಕ್ಕೆ ಪಾರ್ಸೆಲ್‌ಗಳನ್ನು ನೀಡಲಾಯಿತು. ಪ್ರತಿ ಬಸ್ಸಿನಲ್ಲಿ ಓರ್ವ ಗ್ರಾಮ ಲೆಕ್ಕಿಗ ಮತ್ತು ಪೊಲೀಸ್ ಪೇದೆ ತೆರಳಿದ್ದಾರೆ. ಬಾರಕೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಒಂದು ತಿಂಗಳಿಂದ ಆಶ್ರಯ ಪಡೆದಿದ್ದ 123 ಮಂದಿಯನ್ನು ಬಾರಕೂರು ಹನೆಹಳ್ಳಿ ಗ್ರಾಪಂ ಹಾಗೂ ಬ್ರಹ್ಮಾವರ ತಹಸೀಲ್ದಾರ ಕಿರಣಗೌರಯ್ಯ ನೇತೃತ್ವದಲ್ಲಿ ಊರಿಗೆ ಕಳುಹಿಸಲಾಯಿತು. ಕಾಪು ಮತ್ತು ಕಟಪಾಡಿಯಲ್ಲಿ ಆಶ್ರಯ ಪಡೆದಿದ್ದ 26 ಮಂದಿಯನ್ನು 5 ಬಸ್‌ಗಳಲ್ಲಿ ಕಳುಹಿಸಲಾಗಿದೆ.

ಪುತ್ತೂರಿನಲ್ಲಿದ್ದ 300 ಕಾರ್ಮಿಕರನ್ನು ಶುಕ್ರವಾರ ರಾತ್ರಿ ಹಾಗೂ 170 ಮಂದಿಯನ್ನು ಶನಿವಾರ ಕಳುಹಿಸಲಾಗಿದೆ. ಊರಿಗೆ ತೆರಳಲು ಬಸ್‌ಗಳ ವ್ಯವಸ್ಥೆ ಮಾಡಿರುವ ಮಾಹಿತಿ ಪಡೆದ ಕಾರ್ಮಿಕರು ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದು, ಪಟ್ಟಿ ಮಾಡಿ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಕೆಲಸ ನಿರ್ವಹಿಸುತ್ತಿದ್ದ 179 ಮಂದಿ ವಲಸೆ ಕಾರ್ಮಿಕರನ್ನು ಉಜಿರೆ ರತ್ನವರ್ಮ ಕ್ರೀಡಾಂಗಣದಲ್ಲಿ ಆರೋಗ್ಯ ತಪಾಸಣೆ ಬಳಿಕ ಕಳುಹಿಸಿಕೊಡಲಾಯಿತು. ಶಾಸಕ ಹರೀಶ್ ಪೂಂಜ, ತಹಸೀಲ್ದಾರ್ ಗಣಪತಿ ಶಾಸ್ತ್ರಿ ನೇತೃತ್ವ ವಹಿಸಿದ್ದರು. ಸುಳ್ಯ 188, ಮೂಡುಬಿದಿರೆ 279 ಕಾರ್ಮಿಕರನ್ನು ಕಳುಹಿಸಲಾಗಿದೆ.

ವಲಸೆ ಕಾರ್ಮಿಕರಿಗೆ ಪುತ್ತೂರಿನಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ಉಷ್ಣಾಂಶ ಪರೀಕ್ಷೆ ನಡೆಸಲಾಗಿದೆ. 38 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಉಷ್ಣಾಂಶ ಪತ್ತೆಯಾದವರಿಗೆ ಅವಕಾಶ ನೀಡಿಲ್ಲ. - ಡಾ.ಯತೀಶ್ ಉಳ್ಳಾಲ್ ಪುತ್ತೂರು ಸಹಾಯಕ ಕಮಿಷನರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net