

ಚಿತ್ರದುರ್ಗ: ಹಿಂದು ಮಹಾಗಣಪತಿ ವಿಸರ್ಜನೆ ಭಾನುವಾರ ಜರುಗಲಿದ್ದು, ಶನಿವಾರ ಸಂಜೆ 8ರ ನಂತರ ಕೋಟೆನಗರಿ ಸೇರಿ ತಾಲೂಕಿನ ವಿವಿಧೆಡೆಯಿಂದ ಸಾವಿರಾರು ಭಕ್ತರು ತಂಡೋಪ ತಂಡವಾಗಿ ಸ್ವಾಮಿಯ ಸನ್ನಿಧಿಯತ್ತ ಮುಖ ಮಾಡಿದ್ದು, ಪ್ರಮುಖ ವೃತ್ತಗಳಲ್ಲೂ ಸೆಲ್ಫಿಗೆ ಜನರು ಮುಗಿಬಿದ್ದಿದ್ದಾರೆ.
ಇಡೀ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಒಂದೆಡೆಯಿಂದ ಮತ್ತೊಂದೆಡೆ ಸಂಚರಿಸಲು ಸವಾರರು, ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಮದಕರಿನಾಯಕ ವೃತ್ತದಿಂದ ಜೈನಧಾಮದವರೆಗೂ ಜನದಟ್ಟಣೆ ಹೆಚ್ಚಾಗಿದೆ. ಕಿಕ್ಕಿರಿದು ಜನ ಸೇರಿರುವ ಕಾರಣ ಅರ್ಧ ಕಿ.ಮೀ. ದೂರದಿಂದಲೇ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಸ್ವಾಮಿಯ ದರ್ಶನಕ್ಕೆ ಕನಿಷ್ಠ 2 ಗಂಟೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಆಟಿಕೆ ಸಾಮಗ್ರಿಗಳ ವ್ಯಾಪಾರ ವಹಿವಾಟು ಕೂಡಾ ಜೋರಾಗಿದೆ.
ರಾತ್ರಿ 12 ಗಂಟೆಯಾದರೂ ಸ್ವಾಮಿಯ ದರ್ಶನದ ಕ್ರೇಜ್ ಕಡಿಮೆಯಾಗಲಿಲ್ಲ. ಹೀಗಾಗಿ 30 ಸಾವಿರಕ್ಕೂ ಹೆಚ್ಚು ಭಕ್ತರು ಗಣಪನ ದರ್ಶನ ಪಡೆದರು ಎಂದು ಅಂದಾಜಿಸಲಾಗಿದೆ.