

ಲಕ್ಷ್ಮೇಶ್ವರ: ತಾಲೂಕಿನಾದ್ಯಂತ ಶಿವರಾತ್ರಿ ಹಬ್ಬವನ್ನು ಬುಧವಾರ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶಿವ-ಪಾರ್ವತಿಯರು ನಂದಿ ಮೇಲೆ ಆಸೀನರಾದ ವಿಶೇಷವಾದ ಪುಲಿಗೆರೆ ಸೋಮೇಶ್ವರನ ಮೂರ್ತಿಗೆ ಜಲಾಭಿಷೇಕ, ಪೂಜೆ ನೆರವೇರಿತು. ಬೆಳಗ್ಗೆಯಿಂದ ರಾತ್ರಿವರೆಗೂ ಅಪಾರ ಭಕ್ತ ಸಮೂಹ ದೇವಸ್ಥಾನಕ್ಕೆ ಆಗಮಿಸಿ ಪೂಜೆ, ವೃತಾಚರಣೆ ಕೈಗೊಂಡು ದರ್ಶನ, ಪ್ರಸಾದ ಪಡೆದರು.
ರಾತ್ರಿ 21 ಋತ್ವಿಜರ ವೇದ ಮಂತ್ರಘೋಷಗಳೊಂದಿಗೆ (ಯಾಮಪೂಜೆ) ಲಘು ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಮಹಾ ಮಂಗಳಾರತಿ ಜರುಗಿತು.
ಧಾರವಾಡದ ಜಿಲ್ಲಾಧಿಕಾರಿ ದಿವ್ಯ ಪ್ರಭು ಮತ್ತು ಗದಗ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಕುಟುಂಬ ಸಮೇತ ಸೋಮೇಶ್ವರನ ದರ್ಶನ ಪಡೆದರು. ಗುರುವಾರ ರಾತ್ರಿ ದೇವಸ್ಥಾನದಲ್ಲಿ ಸಂಗೀತ, ಭರತನಾಟ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪಟ್ಟಣದ ಗೊಲ್ಲಾಳೇಶ್ವರ, ಸಹಸ್ರಲಿಂಗ, ಲಕ್ಷ್ಮೀಲಿಂಗೇಶ್ವರ ಸೇರಿ ಎಲ್ಲ ಶಿವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಜಾಗರಣೆ ನೆರವೇರಿದವು.