ಶಾಂತಳ್ಳಿಯಲ್ಲಿ ರಥ ಎಳೆದ ಸಹಸ್ರಾರು ಭಕ್ತರು

16spt1
ಸೋಮವಾರಪೇಟೆ ಸಮೀಪದ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಮಹಾರಥೋತ್ಸವ ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು. ಗ್ರಾಮದ ಹಿರಿಯರು ರಥವನ್ನು ಎಳೆದರು.
Published on

ಸೋಮವಾರಪೇಟೆ: ಐತಿಹಾಸಿಕ ಹಿನ್ನೆಲೆಯುಳ್ಳ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಸ್ವಾಮಿಯ ದೇವಾಲಯದ 66ನೇ ವರ್ಷದ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ನಡೆಯಿತು.

ದೇವಾಲಯ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಎಂ.ಲೋಕೇಶ್, ಶಾಂತಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ.ಧರ್ಮಪ್ಪ ಶಾಸಕ ಡಾ.ಮಂತರ್‌ಗೌಡ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಮಾಜಿ ಎಂಎಲ್ಸಿ ಎಸ್.ಜಿ.ಮೇದಪ್ಪ, ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ, ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್, ಪ್ರಮುಖರಾದ ಬಿ.ಬಿ.ಸತೀಶ್, ಬಿ.ಇ.ಜಯೇಂದ್ರ, ಸಜನ್ ಮಂದಣ್ಣ, ಕೆ.ಪಿ.ಚಂಗಪ್ಪ, ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್ ಸೇರಿದಂತೆ ಗ್ರಾಮದ ಪ್ರಮುಖರು ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು.

ಶಾಂತಳ್ಳಿಯ ರಾಜಬೀದಿ ಮಾರ್ಗದಲ್ಲಿ ಅದ್ದೂರಿ ರಥೋತ್ಸವ ಸಾಗಿತು. ಮೆರವಣಿಗೆ ಮುಂಚೂಣಿಯಲ್ಲಿ ಕಳಸ ಹೊತ್ತ ಮಹಿಳೆಯರು ರಥದೊಂದಿಗೆ ಸಾಗಿದರು. ಕೀಲು ಕುದುರೆ, ಬೊಂಬೆ ಕುಣಿತ ನೆರೆದಿದ್ದ ಭಕ್ತರನ್ನು ರಂಜಿಸಿತು. ಕುಟುಂಬಸ್ಥರು ರಥಕ್ಕೆ ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ದಾರಿಯ ಇಕ್ಕೆಲಗಳಲ್ಲೂ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ರಥೋತ್ಸವವನ್ನು ವೀಕ್ಷಿಸಿದರು.

ಶಾಂತಳ್ಳಿ ಹೋಬಳಿಗೆ ಸೇರಿದ ಕುಟುಂಬಗಳಿಗೆ ಕುಮಾರಲಿಂಗೇಶ್ವರ ಸ್ವಾಮಿ ಆರಾಧ್ಯ ದೇವರು. ಪ್ರತಿಯೊಬ್ಬರ ಮನೆಯಲ್ಲೂ ಮನೆದೇವರಾಗಿ ಕುಮಾರಲಿಂಗೇಶ್ವರನ್ನನ್ನೇ ಪೂಜೆ ಮಾಡುತ್ತಾರೆ. ವರ್ಷಂಪ್ರತಿ ಜನವರಿಯಲ್ಲಿ ಎರಡನೇ ವಾರದಲ್ಲಿ ಒಂದು ವಾರದವರೆಗೆ ಜಾತ್ರೋತ್ಸವ ನಡೆಯುತ್ತದೆ. ಗುರು ಹಿರಿಯರ ಅಪೇಕ್ಷೆಯಂತೆ ಕಳೆದ 6 ದಶಕಗಳಿಂದ ಪ್ರತಿವರ್ಷ ರಥೋತ್ಸವ ಹಾಗೂ ಒಂದು ವಾರದ ತನಕ ಧಾರ್ಮಿಕ ವಿವಿಧಾನದಂತೆ ದೇವರ ಪೂಜೆ, ಉತ್ಸವಗಳು ನಡೆಯುತ್ತಿದ್ದು, ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ.

ಬೆಟ್ಟದಳ್ಳಿ, ಹರಗ, ಯಡೂರು, ಕೂತಿ ಅಬ್ಭಿಮಠ ಬಾಚಳ್ಳಿ, ಚಿಕ್ಕತೋಳೂರು, ದೊಡ್ಡತೋಳೂರು, ಕುಮಾರಳ್ಳಿ, ಕೊತ್ತನಳ್ಳಿ, ತಲ್ತಾರೆಶೆಟ್ಟಳ್ಳಿ, ಕುಂದಳ್ಳಿ, ಜಕ್ಕನಳ್ಳಿ, ಬಸವನಕಟ್ಟೆ ಗ್ರಾಮಗಳ ಗ್ರಾಮಸ್ಥರು ಪೂಜೋತ್ಸವದಲ್ಲಿ ಭಾಗವಹಿಸಿ ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಅನ್ನದಾನ ನಡೆಯಿತು. ತೋಟಗಾರಿಕೆ, ಕೃಷಿ ಇಲಾಖೆಯಿಂದ ವಸ್ತುಪ್ರದರ್ಶನ ನಡೆಯಿತು. ಗ್ರಾಮಸ್ಥರು ಬೆಳೆ ವಿಶೇಷ ತರಕಾರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಗ್ರಾಮೀಣ ಜನರು ತಾವು ಉತ್ಪಾದಿಸಿದ ಗುಣಮಟ್ಟದ ಜೇನನ್ನು ತಂದು ಮಾರಾಟ ಮಾಡಿದರು.

ಕ್ರೀಡಾಕೂಟ: ಮಹಾರಥೋತ್ಸವ ಅಂಗವಾಗಿ ಶ್ರೀ ಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಪುರುಷರಿಗೆ ಕಬಡ್ಡಿ ಮತ್ತು ವಾಲಿಬಾಲ್ ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟಗಳು ನಡೆದವು.

ಸಮಾರೋಪ: ಜ.17ರಂದು ಸಮಾರೋಪ ಸಮಾರಂಭ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಬಿ.ಎನ್.ಶಾಂತಪ್ಪ, ಡಿ.ಎಸ್.ಲಿಂಗರಾಜು, ಕೆ.ಕೆ.ಲಿಂಗರಾಜು, ಕೆ.ಎಸ್.ಜಯಾರಾಮ್, ಆಲ್ಪರ್ಟ್ ಅವರನ್ನು ಸನ್ಮಾನಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net