

ಮೈಸೂರು: ಸುರಿಯುವ ಜಿಟಿ ಜಿಟಿ ಮಳೆಯಲ್ಲಿಯೇ ಆಷಾಢ ಎರಡನೇ ಶುಕ್ರವಾರದಲ್ಲಿ ಭಕ್ತರು ಚಾಮುಂಡಿಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದರು.
ಮುಂಜಾನೆ 3 ಗಂಟೆಯಿಂದಲೇ ಚಾಮುಂಡಿಬೆಟ್ಟಕ್ಕೆ ಬರಲಾರಂಭಿಸಿದ ಭಕ್ತರು, ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಆಷಾಢ ಮಾಸದಲ್ಲಿ ಶಕ್ತಿ ದೇವತೆಯ ದರ್ಶನ ಪಡೆದರೆ ಒಳಿತು ಎನ್ನುವ ಪ್ರತೀತಿ ಹಿನ್ನೆಲೆಯಲ್ಲಿ ಎರಡನೇ ಶುಕ್ರವಾರವೂ ಸಹ ನಗರ ಅಲ್ಲದೇ ರಾಜ್ಯ, ಹೊರ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ಮುಂಜಾನೆಯಿಂದಲೇ ಪೂಜಾ ಕೈಂಕರ್ಯ ಎರಡು ಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ನಡೆಯಿತು. ಮುಂಜಾನೆ 5 ಗಂಟೆ ವೇಳೆಗೆ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಎರಡನೇ ಶುಕ್ರವಾರದ ಅಂಗವಾಗಿ ಚಾಮುಂಡೇಶ್ವರಿ ದೇವಿಗೆ ನಾಗಲಕ್ಷ್ಮೀ ಅಲಂಕಾರ ಮಾಡಲಾಗಿತ್ತು.
ಪ್ರತಿ ವಾರದಂತೆ ಮೊದಲಿಗೆ ದೇವಿಗೆ ಅಭಿಷೇಕ, ರುದ್ರಾಭೀಷೇಕ, ಪಂಚಾಮೃತ ಅಭಿಷೇಕ ಸಲ್ಲಿಸಿದ ಬಳಿಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಯಿತು. ನಂತರ ಬೆಳಗ್ಗೆ 11ಕ್ಕೆ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ನೆರವೇರಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಡಾ.ಶಶಿಶೇಖರ ದೀಕ್ಷಿತ್ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಚಾಮುಂಡಿಬೆಟ್ಟದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ನಿಗಾವಹಿಸಿ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅತಿಗಣ್ಯರು, ಗಣ್ಯರನ್ನು ಹೊರತು ಪಡಿಸಿ ಇತರೆ ಎಲ್ಲ ಭಕ್ತರಿಗೂ ಬೆಟ್ಟಕ್ಕೆ ಹೋಗಲು ಜಿಲ್ಲಾಡಳಿತದಿಂದ ಲಲಿತ ಮಹಲ್ ಹೆಲಿಪ್ಯಾಡ್ ಸಮೀಪದಿಂದ ಉಚಿತ ನಗರ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ದೇವರ ಶೀಘ್ರ ದರ್ಶನಕ್ಕೆ 300 ರೂ., 100 ರೂ. ಮತ್ತು 50 ರೂ. ಟಿಕೆಟ್ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ನೂರಾರು ಜನ ಮಳೆಯಲ್ಲೂ ಬೆಟ್ಟದ ಮೆಟ್ಟಿಲುಗಳಿಗೆ ಹರಿದ್ರಾ- ಕುಂಕುಮ ಹಚ್ಚುತ್ತಾ ಮೇಲೇರಿದರು. ಮಳೆಯ ಕಾರಣಕ್ಕೆ ಬೆಳಗ್ಗೆ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಮಳೆ ಬಿಡುವು ನೀಡಿದ ಬಳಿಕ ಭಕ್ತರ ಸಂಖ್ಯೆ ಹೆಚ್ಚಾಯಿತು.
ಹಲವು ಗಣ್ಯರಿಂದ ದರ್ಶನ
ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರ ನಡುವೆಯೇ ಹಲವು ಗಣ್ಯರು ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪತ್ನಿ ಉಷಾ ಶಿವಕುಮಾರ್, ಪುತ್ರಿ ಐಶ್ವರ್ಯಾ, ಪುತ್ರ ಆಕಾಶ್ ಕೆಂಪೇಗೌಡ, ನಟಿಯರಾದ ಸುಧಾರಾಣಿ, ಮಾಳವಿಕಾ ಅವಿನಾಶ್ ಇತರರು ದರ್ಶನ ಪಡೆದರು.
ಭಕ್ತರ ಕಣ್ಮನ ಸೆಳೆದ ಅಲಂಕಾರ
ಎರಡನೇ ಆಷಾಢ ಶುಕ್ರವಾರದ ಅಂಗವಾಗಿ ಚಾಮುಂಡಿಬೆಟ್ಟದ ದೇವಸ್ಥಾನ ಹಾಗೂ ಸುತ್ತಮುತ್ತಲ ಆವರಣವನ್ನು ಆಕರ್ಷಕವಾಗಿ ಸಿಂಗರಿಸಲಾಗಿತ್ತು. ನಾಡದೇವತೆ ನಾಗಲಕ್ಷ್ಮೀ ಅಲಂಕಾರದಿಂದ ಕಂಗೊಳಿಸಿದರೆ, ದೇವಾಲಯದ ಒಳ ಹಾಗೂ ಹೊರ ಆವರಣವನ್ನು ವಿವಿಧ ಬಗೆಯ ಹೂ, ತರಕಾರಿ ಹಾಗೂ ಹಣ್ಣುಗಳಿಂದ ಅಲಂಕಾರ ಮಾಡಲಾಗಿತ್ತು.
ಬದನೆಕಾಯಿ, ಕುಂಬಳಕಾಯಿ, ಮಂಗಳೂರು ಸೌತೆ, ಕಿತ್ತಳೆ, ದಾಳಿಂಬೆ, ಮೋಸಂಬಿ, ಡ್ರ್ಯಾಗನ್ ಫ್ರೂಟ್, ತೆಂಗಿನಕಾಯಿ ಸೇರಿದಂತೆ ವಿವಿಧ ಫಲ- ಪುಷ್ಪಗಳಿಂದ ದೇವಸ್ಥಾನದ ಆವರಣವನ್ನು ಸಿಂಗರಿಸಲಾಗಿತ್ತು.
ದೇವಸ್ಥಾನಕ್ಕೆ ಬರುವ ಭಕ್ತರಿಗೆ ಚಾಮುಂಡಿಬೆಟ್ಟದ ಪಾರ್ಕಿಂಗ್ ಸ್ಥಳದಲ್ಲಿ ಪ್ರಸಾದ ವಿತರಣೆ ಮಾಡಲಾಯಿತು. ಅಲ್ಲದೇ ಬೆಟ್ಟದ ತಪ್ಪಲು, ಪಾರ್ಕಿಂಗ್ ಜಾಗ ಸೇರಿದಂತೆ ನಗರದ ವಿವಿಧೆಡೆ ಹಲವು ಸಂಘಟನೆಗಳು, ಉದ್ಯಮಿದಾರರು, ಸಂಘ, ಸಂಸ್ಥೆಯವರು ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಿದ್ದರು.
ನಗರದ ಹಲವೆಡೆ ಪ್ರಸಾದ ವಿತರಣೆ
ಆಷಾಢ ಶುಕ್ರವಾರದ ಅಂಗವಾಗಿ ನಗರದ ವಿವಿಧ ಬಡಾವಣೆಗಳಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯ, ಪ್ರಸಾದ ವಿತರಣೆ ನಡೆಯಿತು.
ವಿವಿಧ ಬಡಾವಣೆಗಳಲ್ಲಿ ಇರುವ ದೇವಸ್ಥಾನಗಳಿಗೆ ಭೇಟಿ ನೀಡಿದ ಭಕ್ತರು ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಇನ್ನೂ ನಗರದ ಹಲವು ಬಡಾವಣೆಗಳು ಹಾಗೂ ವೃತ್ತಗಳಲ್ಲೂ ಸಹ ಎರಡನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿ, ಭಕ್ತರಿಗೆ ಪ್ರಸಾದ ವಿತರಿಸಲಾಯಿತು.