

ಬೆಂಗಳೂರು: ಪುನಶ್ಚೇತನದ ಹಂತದಲ್ಲಿರುವ ವರ್ತೂರು ಕೆರೆಗೆ ಕೊಳಚೆನೀರು ಹರಿದು ಸಾವಿರಾರು ಮೀನುಗಳು ಸಾವಿಗೀಡಾದ ಪ್ರಕರಣದ ಮಂಗಳವಾರ ಬೆಳಕಿಗೆ ಬಂದಿದೆ.
ಕೆರೆ ಬದಿ ಹಾದುಹೋಗುತ್ತಿದ್ದ ಕೊಳಚೆನೀರು ಕಾಲುವೆಯನ್ನು ಕೆಲ ಪಟ್ಟಭದ್ರರು ಒಡೆದ ಪರಿಣಾಮ ಆ ನೀರು ಕೆರೆಗೆ ಹರಿದಿದೆ. ಇದರಿಂದ ಕೆರೆಯಲ್ಲಿದ್ದ ಅಲ್ಪಸ್ವಲ್ಪ ನೀರು ಕೂಡ ಕಲುಷಿತಗೊಂಡಿದೆ. ಜತೆಗೆ ಕೆರೆ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾದ ಕಾರಣ ಮೀನುಗಳು ಸಾವಿಗೀಡಾಗಿವೆ ಎಂಬ ಅಂಶವನ್ನು ಪರಿಸರವಾದಿಗಳು ಬಿಬಿಎಂಪಿ ಹಾಗೂ ಬಿಡಿಎ ಗಮನಕ್ಕೆ ತಂದಿದೆ.
ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಹೆಚ್ಚು ಮಳೆಯಾಗದ ಕಾರಣ ವರ್ತೂರು ಕೆರೆಯಲ್ಲಿ ಹೂಳು ತೆಗೆಯುವ ಜತೆಗೆ ವೆಟ್‌ಲ್ಯಾಂಡ್ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕೆರೆಯಲ್ಲಿ ನೀರಿನ ಮಟ್ಟ ಕುಸಿದ ಪರಿಣಾಮ ಸುತ್ತಲಿನ ಬೋರ್‌ವೆಲ್‌ಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಈ ಕೊರತೆ ನೀಗಿಸಿಕೊಳ್ಳಲು ಕೊಳಚೆನೀರನ್ನು ಕೆರೆಗೆ ಹರಿಸಲು ಕೆರೆಯ ಒಂದು ಭಾಗದಲ್ಲಿ ಒಡೆದು ಆ ಮೂಲಕ ನೀರು ಹರಿಸಲಾಗಿದೆ. ಇದರಿಂದಲೇ ಮೀನುಗಳು ಸತ್ತಿವೆ ಎಂಬುದಾಗಿ ಸ್ಥಳೀಯರು ದೂರಿದ್ದಾರೆ.
ಕೆರೆ ಪುನಶ್ಚೇತನ ಕಡೆಗಣನೆ:
ಬೆಳ್ಳಂದೂರು ಕೆರೆ ಹಾಗೂ ವರ್ತೂರು ಕೆರೆಯನ್ನು ಪುನಶ್ಚೇತನ ಕಾರ್ಯ ಎನ್‌ಜಿಟಿ ಆದೇಶದ ಮೇರೆಗೆ ಸರ್ಕಾರ ವರ್ಷಗಳ ಹಿಂದೆಯೇ ಕೈಗೆತ್ತಿಕೊಂಡಿತ್ತು. 2019ರ ಬಳಿಕ ವಿವಿಧ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಸೂಕ್ತ ಮೇಲ್ವಿಚಾರಣೆಯಿಲ್ಲದೆ ಎರಡೂ ಕೆರೆಗಳು ಮತ್ತ ಸಮಸ್ಯೆಯ ಸುಳಿಯಲ್ಲಿ ಸಿಲುಕಿವೆ. ವರ್ತೂರು ಕೆರೆಗೆ ಸಂಬಂಧಿಸಿದಂತೆ ಹೂಳೆತ್ತುವ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ವೆಟ್ ಲ್ಯಾಂಡ್ ನಿರ್ಮಾಣ ಪ್ರಗತಿಯಲ್ಲಿದೆ. ಜತೆಗೆ ಇತರ ಕೆಲಸಗಳು ಬಾಕಿ ಉಳಿದಿವೆ. ಮುಖ್ಯವಾಗಿ ಕೊಳಚೆನೀರು ಕೆರೆಗೆ ಹರಿಯದಂತೆ ಮಾಡಲು ಎಸ್‌ಟಿಪಿ ಘಟಕಗಳನ್ನು ಸ್ಥಾಪಿಸುವ ಕಾರ್ಯ ವಿಳಂಬವಾಗಿದೆ. ಇದು ಇನ್ನೊಂದು ಸಮಸ್ಯೆಯನ್ನು ಸೃಷ್ಟಿಸಿದ್ದು, ಶುದ್ಧೀಕರಿಸಿದ ನೀರನ್ನು ಎಲ್ಲಿಗೆ ಹರಿಸಬೇಕು ಎಂಬುದು ಇನ್ನೂ ಅಂತಿಮವಾಗಿಲ್ಲ. ಈ ಕಾರಣದಿಂದ ವರ್ತೂರು ಕೆರೆಯ ಪುನಶ್ಚೇತನ ಕೆಲಸ ಕಡೆಗಣಿಸಲ್ಪಟ್ಟಿದೆ ಎಂದು ಪರಿಸರಪ್ರಿಯರು ಆಕ್ಷೇಪಿಸಿದ್ದಾರೆ.
ದೂರು ನೀಡಿದರೂ ಕ್ರಮ ಇಲ್ಲ?
ವರ್ತೂರು ಕೆರೆಯಲ್ಲಿ ಮೀನುಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇದನ್ನಾಧರಿಸಿ ಇನ್ನಷ್ಟೇ ಕ್ರಮ ಕೈಗೊಳ್ಳಬೇಕಿದೆ. ಈ ಹಿಂದೆಯೂ ಇಂಥದ್ದೇ ಪ್ರಕರಣ ನಡೆದಿದ್ದರೂ ತಪ್ಪಿಸ್ಥರ ವಿರುದ್ಧ ಕ್ರಮ ಆಗಿರಲಿಲ್ಲ. ಸರಿಯಾದ ಸಾಕ್ಷ್ಯ ಇಲ್ಲದ ಕಾರಣ ಪ್ರಕರಣ ಭೇದಿಸಲು ಸಾಧ್ಯವಾಗುತ್ತಿಲ್ಲ ಎಂಬ ಆಕ್ಷೇಪ ಸ್ಥಳೀಯರಿಂದ ವ್ಯಕ್ತವಾಗಿದೆ.
ವರ್ತೂರು ಕೆರೆ ಪುನಶ್ಚೇತನ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಕೊಳಚೆನೀರು ಕೆರೆಗೆ ಸೇರಿದ ಕಾರಣ ಮೀನುಗಳು ಸತ್ತಿವೆ ಎಂದು ಹೇಳಲಾಗಿದೆ. ಸೂಕ್ತ ಮೇಲ್ವಿಚಾರಣೆ ಇಲ್ಲದ ಕಾರಣ ಈ ಘಟನೆ ನಡೆದಿದೆ. ಸರ್ಕಾರ ಈ ಕೆರೆಯನ್ನು ಉಳಿಸುವ ನಿಟ್ಟಿನಲ್ಲಿ ಗಂಭೀರ ಯತ್ನ ಮಾಡಬೇಕು.
- ಜಗದೀಶ್ ರೆಡ್ಡಿ, ವರ್ತೂರು ನಿವಾಸಿ