

ಬೆಂಗಳೂರು : ನಗರದಲ್ಲಿ ಕಸ ವಿಂಗಡಣೆ ಮಾಡದೆ ಪೌರಕಾರ್ಮಿಕರಿಗೆ ನೀಡುವ ಮನೆಗಳಿಗೆ ಒಂದು ದಿನಕ್ಕೆ 1 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ. ದೀಪಾಂಜಲಿ ನಗರ ಮತ್ತು ಗಾಳಿ ಆಂಜನೇಯ ದೇವಸ್ಥಾನ ವಾರ್ಡ್‌ಗಳಲ್ಲಿ ನೂತನ ಹಸಿ ಕಸ, ಒಣ ಕಸ ಮತ್ತು ಸ್ಯಾನಿಟರಿ ತ್ಯಾಜ್ಯದ ಪ್ರತ್ಯೇಕ ಸಂಗ್ರಹಣೆ ಯೋಜನೆ ಆರಂಭಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಪ್ರತಿನಿತ್ಯ ವಿಂಗಡಣೆ ಮಾಡಲಾದ ಹಸಿ ಕಸ, ಸ್ಯಾನಿಟರಿ ತ್ಯಾಜ್ಯ ಮತ್ತು ವಾರಕ್ಕೆರಡು ಬಾರಿ ಒಣ ಕಸವನ್ನು ಮಾತ್ರ ಸ್ವೀಕಾರ ಮಾಡುತ್ತೇವೆ ಎಂದು ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ಯಾರು ಕಸ ವಿಂಗಡಣೆ ಮಾಡುವುದಿಲ್ಲವೂ ಅಂತಹ ಮನೆಗಳ ವಿಳಾಸವನ್ನು ಮಾರ್ಷಲ್‌ಗಳಿಗೆ ಕೊಡಬೇಕು. ಅವರು 2 ಬಾರಿ ಸೂಚನೆ ಎಚ್ಚರಿಕೆ ನೀಡುತ್ತಾರೆ, ಪುನಃ ಕಸ ವಿಂಗಡಿಸದೆ ನೀಡಿದಲ್ಲಿ ಅಂತಹ ಮನೆಗಳಿಗೆ 1 ಸಾವಿರ ರೂ. ದಂಡ ವಿಧಿಸಲಿದ್ದಾರೆ ಎಂದರು.
ಪ್ರತಿ ಮನೆ ಸಂಗ್ರಹಣೆ ಮಾಡಿ: ಪೌರ ಕಾರ್ಮಿಕರು ಪ್ರತಿಯೊಂದು ಮನೆಗಳಿಂದಲೂ ಕಸ ಸಂಗ್ರಹಣೆ ಮಾಡಬೇಕು. ಯಾವುದೇ ಒಂದು ಮನೆ ಅಥವಾ ಕಟ್ಟಡದ ಕಸ ಸಂಗ್ರಹಣೆ ಮಾಡಿದರೆ, ಅವರು ರಾತ್ರಿ ವೇಳೆ ರಸ್ತೆ, ರಾಜಕಾಲುವೆ ಅಥವಾ ಬಯಲು ಪ್ರದೇಶದಲ್ಲಿ ಕಸ ಹಾಕಿ ಹೋಗುತ್ತಾರೆ. ಇದರಿಂದ ಬ್ಲಾಕ್ ಸ್ಪಾಟ್ (ಅನಧಿಕೃತ ಕಸ ಸುರಿದ ಸ್ಥಳ) ನಿರ್ಮಾಣವಾಗಲಿದ್ದು, ಸಾಂಕ್ರಾಮಿಕ ರೋಗ ಹರಡಲು ಸಾಧ್ಯವಾಗುತ್ತದೆ. ಜತೆಗೆ, ನಗರ ಸೌಂದರ್ಯ ಹಾಳಾಗುವ ಮೂಲಕ ಪಾಲಿಕೆಗೆ ಕೆಟ್ಟ ಹೆಸರು ಬರಲಿದೆ. ಪುನಃ ಬ್ಲಾಕ್ ಸ್ಪಾಟ್ ಸ್ವಚ್ಛಗೊಳಿಸುವ ಕಾರ್ಯ ಮಾಡಬಾರದು ಎಂದು ಪೌರಕಾರ್ಮಿಕರಿಗೆ ಮಾಹಿತಿ ನೀಡಿದರು.
ರಸ್ತೆಯಲ್ಲಿ ಕಸ ಹಾಕುವವರ ಬಂಧನ: ಪಾಲಿಕೆಯಿಂದ ಉತ್ತಮ ರಸ್ತೆ, ಮೂಲ ಸೌಕರ್ಯ ವ್ಯವಸ್ಥೆ ಮಾಡಿದರೂ, ಜನರು ರಸ್ತೆ ಮೇಲೆ ಕಸ ಎಸೆಯುವುದು ಅಪರಾಧವಾಗಿದೆ. ಅವರಿಗೆ ತಲಾ 1 ಸಾವಿರ ರೂ. ದಂಡ ವಿಧಿಸಲಾಗುವುದು. ಪಾಲಿಕೆಗೆ ದಂಡ ಕಟ್ಟದೆ ಪುನರಾವರ್ತನೆ ಮಾಡಿದಲ್ಲಿ ಅವರ ವಿರುದ್ಧ ಪೊಲೀಸ್ ದೂರು ನೀಡಿ ಬಂಧಿಸಲು ಘನತ್ಯಾಜ್ಯ ನಿರ್ವಹಣಾ ಕಾಯ್ದೆಯಲ್ಲಿ ಅವಕಾಶವಿದೆ ಎಂದು ಪಾಲಿಕೆ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಹೇಳಿದರು.