ಒಂದೇ ದಿನ ಸಾವಿರ ಪ್ರಕರಣ!

Covid
Published on

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಒಂದೇ ದಿನ ಸಾವಿರಕ್ಕೂ ಅಧಿಕ ಜನರು ಕರೊನಾ ಸೋಂಕಿಗೆ ಒಳಗಾದ ಪ್ರಕರಣಗಳು ಗುರುವಾರ ದಾಖಲಾಗಿವೆ.

ಗುರುವಾರ 1175 ಹೊಸ ಜನರಲ್ಲಿ ಸೋಂಕು ದೃಢಪಟ್ಟಿದ್ದು, ಓರ್ವರು ಮೃತಪಟ್ಟಿದ್ದಾರೆ. 206 ಮಂದಿ ಗುಣವಾಗಿದ್ದಾರೆ. ಸಕ್ರಿಯ ಪ್ರಕರಣಗಳು 5662 ತಲುಪಿದೆ. ಅಧಿಕ ಸೋಂಕು ಪ್ರಕರಣಗಳು ದಾಖಲಾದ ನಾಲ್ಕು ಕಂಟೈನ್ಮೆಂಟ್ ವಲಯಗಳನ್ನು ಆರೋಗ್ಯ ಇಲಾಖೆ ಗುರುತಿಸಿದೆ.

ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಇಂದು ದಾಖಲದ ದೊಡ್ಡ ಸಂಖ್ಯೆಯ ಪಾಸಿಟಿವ್ ಪ್ರಕರಣಗಳು ವಾರದ ಹಿಂದಿನ ಪ್ರಕರಣಗಳೂ ಸೇರಿವೆ. ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಮಿಲಾಗ್ರಿಸ್ ಮತ್ತು ಬಳ್ಳಾಲ್‌ಬಾಗ್‌ನಲ್ಲಿ ತಲಾ ಒಂದು ಅಪಾರ್ಟ್‌ಮೆಂಟ್, ಬಂಟ್ವಾಳ ಪಲ್ಲಮಜಲುವಿನ ಮನೆ ಹಾಗೂ ಮೇರಿಹಿಲ್‌ನಲ್ಲಿ ಒಂದು ಕಾನ್ವೆಂಟ್ ಕಂಟೈನ್ಮೆಂಟ್ ಜೋಗಳಾಗಿ ಗುರುತಿಸಿದ ಪ್ರದೇಶಗಳು.

ಹಳೇ ಪರೀಕ್ಷಾ ವರದಿ: ಕರ್ಫ್ಯೂ ಸಂದರ್ಭ ಜನತೆ ತೋರಿದ ಎಚ್ಚರಿಕೆ, ಸಂಯಮದ ಫಲಿತಾಂಶ ವಾರದ ಬಳಿಕ ಗೊತ್ತಾಗಲಿದೆ. ಗುರುವಾರ ಪ್ರಕಟವಾದ ಕೋವಿಡ್ ಪರೀಕ್ಷೆ ಫಲಿತಾಂದಲ್ಲಿ ಶೇ.90 ಭಾಗ ಹಳೇ ಪರೀಕ್ಷೆ ವರದಿಗಳು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ತಿಳಿಸಿದ್ದಾರೆ. ಪರಿಸ್ಥಿತಿಯನ್ನು ನಿರ್ಲಕ್ಷಿಸುವಂತಿಲ್ಲ. ಅವಶ್ಯ ವಸ್ತುಗಳ ಖರೀದಿಗೆ ಬೆಳಗ್ಗೆ ನೀಡಿರುವ ಕಾಲಾವಧಿಯಲ್ಲಿ ಜನರು ಗಂಪು ಸೇರುತ್ತಿದ್ದಾರೆ. ಇದನ್ನು ನಿಯಂತ್ರಿಸಬೇಕಾಗಿದೆ. ಮಂಗಳೂರು ಸೆಂಟ್ರಲ್ ಮಾರುಕಟ್ಟೆ ಸಮೀಪ ವ್ಯಾಪಾರಿಗಳು ಬೆಳಗ್ಗಿನ ಹೊತ್ತು ಸೇರುತ್ತಿರುವುದು ಜನದಟ್ಟಣೆ ಹೆಚ್ಚಲು ಕಾರಣ. ಇಲ್ಲಿಯ ಗುಂಪನ್ನು ಎಪಿಎಂಸಿ ಭಾಗಕ್ಕೆ ಹಂಚುವ ಕುರಿತು ಮನಪಾ ಆಯುಕ್ತರ ಜತೆ ಸಮಾಲೋಚನೆ ನಡೆಸಿದ್ದೇನೆ. ಶುಕ್ರವಾರ ಅಧಿಕಾರಿಗಳು ಕ್ರಮ ಕೈಗೊಳ್ಳುವರು ಎಂದರು.

568 ಮಂದಿಗೆ ಪಾಸಿಟಿವ್, ಇಬ್ಬರ ಸಾವು

ಉಡುಪಿ: ಜಿಲ್ಲೆಯಲ್ಲಿ ಗುರುವಾರ 568 ಮಂದಿಗೆ ಕರೊನಾ ದೃಢಪಟ್ಟಿದ್ದು, ಕುಂದಾಪುರದಲ್ಲಿ 76 ವರ್ಷದ ಮಹಿಳೆ ಹಾಗೂ ಕಾರ್ಕಳದಲ್ಲಿ 62 ವರ್ಷದ ಪುರುಷ ಮೃತಪಟ್ಟಿದ್ದಾರೆ. ಸೋಂಕಿತರಲ್ಲಿ 312 ಮಂದಿ ಉಡುಪಿ, 175 ಮಂದಿ ಕುಂದಾಪುರ, 78 ಮಂದಿ ಕಾರ್ಕಳ ತಾಲೂಕಿನವರಿದ್ದಾರೆ. ಮೂರು ಮಂದಿ ಹೊರ ಜಿಲ್ಲೆಯವರು. ಇವರಲ್ಲಿ 364 ಮಂದಿ ರೋಗ ಲಕ್ಷಣ ಹೊಂದಿದ್ದಾರೆ. 28 ಮಂದಿ ಕೋವಿಡ್ ಅಸ್ಪತ್ರೆಯಲ್ಲಿ ಹಾಗೂ 540 ಮಂದಿ ಹೋಂ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 439 ಮಂದಿ ಗುಣವಾಗಿದ್ದಾರೆ. ಸಕ್ರಿಯ ಪ್ರಕರಣ ಸಂಖ್ಯೆ 2359ಕ್ಕೆ ಏರಿಕೆಯಾಗಿದೆ.

ಕಾಸರಗೋಡಲ್ಲಿ 1063 ಕೇಸ್

ಕಾಸರಗೋಡು: ಜಿಲ್ಲೆಯ 1063 ಮಂದಿ ಸೇರಿ ಕೇರಳದಲ್ಲಿ ಗುರುವಾರ 38607 ಮಂದಿಗೆ ಕೋವಿಡ್ ಬಾಧಿಸಿದೆ. 48 ಮಂದಿ ಸಾವಿಗೀಡಾಗಿದ್ದು, ಇದುವರೆಗೆ ರಾಜ್ಯದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 5259ಕ್ಕೇರಿದೆ.

ಶಾಸಕ ಹಾಲಾಡಿ ಅಸ್ಪತ್ರೆಯಿಂದ ಬಿಡುಗಡೆ

ಉಡುಪಿ: ಕೋವಿಡ್ ಹಿನ್ನೆಲೆ ಕಳೆದ ವಾರ ಟಿಎಂಎ ಪೈ ಆಸ್ಪತ್ರೆಗೆ ದಾಖಲಾಗಿದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸೋಂಕುಮುಕ್ತರಾಗಿ ಗುರುವಾರ ಬಿಡುಗಡೆಯಾಗಿದ್ದಾರೆ ಎಂದು ಅಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net