

ಬೆಂಗಳೂರು: ಇಸ್ಕಾನ್ ದೇವಾಲಯದಲ್ಲಿ ವಿಶೇಷ ಗೋವರ್ಧನ ಪೂಜೆ ಹಾಗೂ 1 ಸಾವಿರ ಕೆ.ಜಿ. ತೂಕದ ಗೋವರ್ಧನಗಿರಿಯನ್ನು ಹೋಲುವ ಕೇಕ್ ತಯಾರಿಸುವ ಮೂಲಕ ದೀಪಾವಳಿ ಸಂಭ್ರಮ ಆಚರಿಸಲಾಯಿತು.
ಗೋವರ್ಧನಗಿರಿಯನ್ನು ಶ್ರೀಕೃಷ್ಣ ಎತ್ತಿಹಿಡಿದು ಮಥುರಾ ನಿವಾಸಿಗಳನ್ನು ಅಗ್ನಿ ಮಳೆಯಿಂದ ರಕ್ಷಿಸಿದ್ದ. ಹೀಗಾಗಿ ಕಾರ್ತಿಕ ಮಾಸದ ಶುದ್ಧ ಪ್ರತಿಪದೆ ದಿನವಾದ ಭಾನುವಾರ ಇಸ್ಕಾನ್ ಮಂದಿರದಲ್ಲಿ ಕೃಷ್ಣ ಮತ್ತು ಬಲರಾಮರಿಗೆ ಗಿರಿಧಾರಿ ಅಲಂಕಾರ ಮತ್ತು ರಾಧಾಕೃಷ್ಣ ಉತ್ಸವ ಮೂರ್ತಿಗೆ ಶ್ರೀ ರಾಧಾ ಗಿರಿಧಾರಿಯಾಗಿ ಸಿಂಗರಿಸಿ ಪೂಜಿಸಲಾಯಿತು. ಗೋವುಗಳಿಗೆ ವಿಶೇಷ ಪೂಜೆ, ನೈವೇದ್ಯ ಮತ್ತು ಗೋಗ್ರಾಸ ವನ್ನು ಸಮರ್ಪಿಸಲಾಯಿತು.
ಗೋವರ್ಧನಗಿರಿ ಪೂಜೆ ಕುರಿತು ಇಸ್ಕಾನ್ ಅಧ್ಯಕ್ಷ ಮಧು ಪಂಡಿತದಾಸ ವಿಶೇಷ ಉಪನ್ಯಾಸ ನೀಡಿದರು. ಭಕ್ತರಿಂದ ಶ್ರೀ ಕೃಷ್ಣ ಲೀಲೆಗಳನ್ನಾಧರಿಸಿ ಸಂಗೀತೋತ್ಸವ ನಡೆಯಿತು. ನಂತರ ದೇವರಿಗೆ ಮಹಾಮಂಗಳಾರತಿ, ಶಯನ ಪಲ್ಲಕ್ಕಿ ಮತ್ತು ಶಯನ ಉತ್ಸವ ನೆರವೇರಿಸಲಾಯಿತು.
56 ತಿನಿಸು ಸಮರ್ಪಣೆ
ಕೇಕ್ನಿಂದ ಮಥುರಾದ ಗೋವರ್ಧನ ಗಿರಿಯ ಆಕೃತಿ ತಯಾರಿಸಲಾಗಿತ್ತು. ಕೇಕ್ ಜತೆಗೆ ಜಾಮೂನು, ರಸಗುಲ್ಲ, ಬರ್ಫಿ, ಲಡ್ಡು, ಪೇಡಾ, ಚಕ್ಕುಲಿ, ನಿಪ್ಪಟ್ಟು ಸೇರಿ ವಿವಿಧ ಬಗೆಯ 56 ತಿಂಡಿಗಳನ್ನು ಶ್ರೀಕೃಷ್ಣನಿಗೆ ಸಮರ್ಪಿಸಲಾಯಿತು.