

ಮಂಡ್ಯ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದಲ್ಲಿ ಒಂದು ಸಾವಿರ ಅಡಿ ಉದ್ದದ ತಿರಂಗಾ ಮೆರವಣಿಗೆಯೊಂದಿಗೆ ಮಂಡ್ಯ ಯೂತ್ ಗ್ರೂಪ್ ದಾಖಲೆ ಬರೆದಿದೆ.
ಜಿಲ್ಲಾಸ್ಪತ್ರೆ ರಸ್ತೆಯಲ್ಲಿರುವ ನಿರಾಳ ಕ್ಲಿನಿಕ್ ಎದುರು ಗ್ರೂಪ್‌ನ ಅಧ್ಯಕ್ಷ ಡಾ.ಅನಿಲ್ ಆನಂದ್ ಧ್ವಜಾರೋಹಣ ನೆರವೇರಿಸಿದರು. ಯೂತ್ ಗ್ರೂಪ್‌ನ ಪದಾಧಿಕಾರಿಗಳು ಹಾಗೂ ಬಿಎಲ್‌ಎಸ್ ನರ್ಸಿಂಗ್ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತ್ರಿವರ್ಣಗಳಿಂದ ಕೂಡಿದ ಪೇಪರ್ ಬಾಂಬ್‌ಗಳನ್ನು ಸಿಡಿಸುವುದರೊಂದಿಗೆ ತಿರಂಗಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ನಿರಾಳ ಕ್ಲಿನಿಕ್‌ನಿಂದ ಆರಂಭವಾದ ತಿರಂಗಾ ಮೆರವಣಿಗೆ ಆಸ್ಪತ್ರೆ ರಸ್ತೆ ಮೂಲಕ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾಗಿ ವಿ.ವಿ.ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ, ಬನ್ನೂರು ರಸ್ತೆಯ ಅಂಬೇಡ್ಕರ್ ವೃತ್ತದ ಬಳಿ ತಿರುವನ್ನು ಪಡೆದುಕೊಂಡು ಮತ್ತೆ ವಾಪಸ್ ನೂರಡಿ ರಸ್ತೆ, ಹೊಸಹಳ್ಳಿ ವೃತ್ತ, ಡಾ.ಬೆಸಗರಹಳ್ಳಿ ರಾಮಣ್ಣ ಸರ್ಕಲ್ ಮೂಲಕ ನಿರಾಳ ಕ್ಲಿನಿಕ್ ಬಳಿ ಅಂತ್ಯಗೊಂಡಿತು.
ಡಿಜೆಯಲ್ಲಿ ಮೊಳಗುತ್ತಿದ್ದ ದೇಶಭಕ್ತಿ ಗೀತೆಗಳೊಂದಿಗೆ ಬೃಹತ್ ತಿರಂಗಾ ವಿವಿಧ ರಸ್ತೆಗಳಲ್ಲಿ ಸಾಗುತ್ತಿದ್ದ ವೇಳೆ ಸಾವಿರಾರು ಸಾರ್ವಜನಿಕರು ರಸ್ತೆ ಬದಿಯಲ್ಲಿ ನಿಂತು ತಿರಂಗ ವೀಕ್ಷಿಸಿದರು. ಗರ್ಭಿಣಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಯಾಶಿಕಾ ಅನಿಲ್ ಭಾರತ ಮಾತೆಯ ರೂಪದಲ್ಲಿ ಧ್ವಜ ಹಿಡಿದು ತಿರಂಗ ಯಾತ್ರೆ ಮುನ್ನಡೆಸಿದರು. ಗ್ರೂಪ್‌ನ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ತಲೆಗೆ ಕೇಸರಿ ಮತ್ತು ಹಸಿರು ಬಣ್ಣದ ಟೇಪುಗಳನ್ನು ಕಟ್ಟಿಕೊಂಡು ಸಾಗಿದ್ದು ವಿಶೇಷವಾಗಿತ್ತು.
ಗ್ರೂಪ್‌ನ ದರ್ಶನ್, ರಕ್ಷಿತ್, ದೀಪು, ಮಲ್ಲೇಶ್, ಮಂಜು, ನವೀನ್, ಪ್ರವೀಣ್, ವಿನಯ್, ದೇವಿ, ಯೋಗಿ, ಬಿ.ಎಂ.ಅಪ್ಪಾಜಪ್ಪ, ಹರ್ಷದ್, ಶಶಿ, ಬಿಎಲ್‌ಎಸ್ ಕಾಲೇಜಿನ ಉಪನ್ಯಾಸಕಿ ಶಿಲ್ಪಾ ಇತರರಿದ್ದರು. ಇದೇ ವೇಳೆ ಡಾ.ಅನಿಲ್ ಆನಂದ್ ಮತ್ತು ಡಾ.ಯಾಶಿಕಾ ಅನಿಲ್ ನೇತೃತ್ವದಲ್ಲಿ ರಕ್ತದಾನ ಶಿಬಿರ ನಡೆಯಿತು.