

ಮಧುಗಿರಿ : ಶ್ರೀ ಮಹರ್ಷಿ ವಾಲ್ಮೀಕಿ ಎಲ್ಲ ವರ್ಗದವರಿಗೆ ಸೇರಿದವರಾಗಿದ್ದು, ಅಂತಹ ಮಹಾನ್ ವ್ಯಕ್ತಿಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ತಹಸೀಲ್ದಾರ್ ಶ್ರೀನಿವಾಸ್ ತಿಳಿಸಿದರು.
ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಕರೆಯಲಾಗಿದ್ದ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಬಾರಿಯ ಜಯಂತಿಯು ಅರ್ಥಪೂರ್ಣವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲು ತೀಮಾರ್ನಿಸಿದ್ದು, ಜಯಂತಿಗೆ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಆಹ್ವಾನಿಸಲಾಗುತ್ತದೆ. ಹಾಗಾಗಿ ಎಲ್ಲರೂ ಕೈ ಜೋಡಿಸಿ ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಡಾ.ದಿನೇಶ್ ಮಾತನಾಡಿ, ಮಹರ್ಷಿ ವಾಲ್ಮೀಕಿಯ ಸಂದೇಶಗಳನ್ನು ಜಯಂತಿ ಕಾರ್ಯಕ್ರಮದಲ್ಲಿ ವಿಶೇಷವಾಗಿ ತಿಳಿಸಿಕೊಡಲು ಕ್ರಮವಹಿಸಲಾಗಿದೆ. ವಿವಿಧ ಕಲಾತಂಡಗಳೊಂದಿಗೆ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿ ಕನ್ನಡಭವನ ತಲುಪಿ ಅದ್ದೂರಿಯಾಗಿ ಕಾರ್ಯಕ್ರಮ ಆಚರಿಸಲು ತೀಮಾರ್ನಿಸಲಾಗಿದೆ ಎಂದರು.
ಪಿಎಸ್ಐ ಮುತ್ತುರಾಜು, ಹಿರಿಯ ನಿಲಯಪಾಲಕ ಪಿ.ಚಿಕ್ಕರಂಗಪ್ಪ, ವ್ಯವಸ್ಥಾಪಕ ರಾಂಪ್ರಸಾದ್, ತಾಲೂಕು ನಾಯಕ ಸಂಘದ ಗೌರವ ಅಧ್ಯಕ್ಷ ರಂಗಾಶ್ಯಾಮಣ್ಣ, ಅಧ್ಯಕ್ಷ ಜಗದೀಶ್, ಕುಮಾರ್, ಕಾರ್ಯದರ್ಶಿ ಶಂಕರನಾರಾಯಣ, ಕಿಶೋರ್, ಚಿರಂಜೀವಿ, ಟಿವಿಎಸ್ ಮಂಜು, ಚಂದ್ರಮ್ಮ, ಮಂಜುಳಾ, ಕಿರಿಯ ನಿಲಯಪಾಲಕ ಗೋವಿಂದರಾಜು, ಪಯಾಜ್, ಮನೋಜ್ ಮತ್ತಿತರರು ಇದ್ದರು.