

ಇಂಡಿ: ಪರಿಶ್ರಮ ಮತ್ತು ಬೌದ್ಧಿಕ ಪ್ರತಿಭೆ ಮೂಲಕ ಶ್ರೇಷ್ಠ ಚಿಂತಕರಾಗಿದ್ದ ಡಾ. ಅಂಬೇಡ್ಕರರ ಚಿಂತನೆಗಳು ಇಡೀ ಜಗತ್ತಿಗೆ ಪ್ರಭಾವಶಾಲಿಯಾಗಿವೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಅಂಬೇಡ್ಕರ್ ಒಬ್ಬ ಸಾಮಾಜಿಕ ನಾವೀಣ್ಯತೆಯ ಚಿಂತಕರಾಗಿ, ದೀನದಲಿತ ವರ್ಗಗಳಲ್ಲಿ ಸ್ವಪ್ರಜ್ಞೆ ಮತ್ತು ಸ್ವಾಭಿಮಾನ ಮೂಡಿಸಲು ಪ್ರಯತ್ನಿಸಿದರು. ಮುಗ್ಧ ವ್ಯಕ್ತಿಯಾಗಿ ಉಳಿಯುವ ಬದಲು ಪ್ರಭಾವಶಾಲಿ ವ್ಯಕ್ತಿತ್ವ ಹೊಂದಬೇಕೆಂಬ ಅವರ ನಿಲುವು ಇಂದಿಗೂ ಆದರ್ಶಪ್ರಾಯವಾಗಿದೆ ಎಂದರು.
ಇಂಡಿ ಸರ್ಕಾರಿ ಐಟಿಐ ಕಾಲೇಜಿನ ಪ್ರಾಚಾರ್ಯ ಪಿ. ವೈ. ರಜನಿಕರ ಮಾತನಾಡಿ, ಡಾ. ಅಂಬೇಡ್ಕರ್ ಅವರ ತತ್ವಶಾಸ್ತ್ರ ಮತ್ತು ವಿಚಾರಗಳು ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಿವೆ ಎಂದರು. ಶಿಕ್ಷಕ ಎಸ್.ಆರ್. ಚಾಳೇಕರ ಮಾತನಾಡಿದರು. ಮುಖ್ಯಶಿಕ್ಷಕ ಅನಿಲ ಪತಂಗಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯಶಿಕ್ಷಕರಾದ ಎಸ್.ಎಸ್. ಅರಬ, ವಿ.ವೈ. ಪತ್ತಾರ ಮತ್ತು ಶಿಕ್ಷಕರಾದ ಶಾಂತೇಶ ಹಳಗುಣಕಿ, ಎಸ್.ಬಿ. ಕುಲಕರ್ಣಿ, ಎಸ್.ಡಿ. ಬಿರಾದಾರ, ಜೆ.ಎಂ. ಪತಂಗಿ, ಎನ್.ಬಿ. ಚೌಧರಿ, ಎಸ್.ಪಿ. ಪೂಜಾರಿ, ಸಾವಿತ್ರಿ ಸಂಗಮದ, ಸುಮಿತ್ರಾ ನಂದಗೊಂಡ, ಸುರೇಶ ದೊಡ್ಯಾಳಕರ, ಎಸ್.ಎನ್. ಡಂಗಿ, ಜೆ.ಸಿ. ಗುಣಕಿ ಇತರರಿದ್ದರು.