

ನೆಲಮಂಗಲ: ನಗರವನ್ನು ಲಾಕ್‌ಡೌನ್ ಮಾಡುವ ಜತೆಗೆ ಪಾಸಿಟಿವ್ ಪ್ರಕರಣ ಪತ್ತೆಯಾಗಿರುವ ಪ್ರದೇಶವನ್ನು ಸೀಲ್‌ಡೌನ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಡಾ.ಕೆ.ಶ್ರೀನಿವಾಸ್‌ಮೂರ್ತಿ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಆಶಾ ಕಾರ್ಯಕರ್ತೆಯರಿಗೆ ರೋಗನಿರೋಧಕ ಶಕ್ತಿ ವೃದ್ಧಿಸುವ ಔಷಧ ವಿತರಣೆ ಮಾಡಿ ಮಾತನಾಡಿದರು.
ನಗರದೆಲ್ಲೆಡೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರ ವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಇದನ್ನು ಮನಗುಂಡು ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ನಗರವನ್ನು ಸಂಪೂರ್ಣ ಲಾಕ್‌ಡೌನ್ ಮಾಡುವ ಜತೆಗೆ ಪ್ರಕರಣ ಪತ್ತೆಯಾಗಿರುವ ಪ್ರದೇಶವನ್ನು ಸೀಲ್‌ಡೌನ್ ಮಾಡುವುದಾಗಿ ತಿಳಿಸಿದರು.
ಆಶಾ ಕಾರ್ಯಕರ್ತೆಯರ ಆರೋಗ್ಯ ಕಾಪಾಡುವುದು, ಕರೊನಾ ವೈರಸ್‌ನಿಂದ ರಕ್ಷಣೆ ಮಾಡುವ ಉದ್ದೇಶದಿಂದ ವೈದ್ಯ ಡಾ.ರಾಘವೇಂದ್ರಜೋಷಿ ಅವರು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧ, ಮಾತ್ರೆ ವಿತರಣೆ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.
ದೈಹಿಕ ಅಂತರ ಕಾಯ್ದುಕೊಳ್ಳುವ ಜತೆಗೆ ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳದ ಹೊರತು ಕರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಮನಗಂಡು ರೋಗನಿರೋಧಕ ಶಕ್ತಿ ವೃದ್ಧಿಮಾಡುವ ಔಷಧ ವಿತರಣೆ ಮಾಡಲಾಗುತ್ತಿದೆ. ಔಷಧ ತಗೆದುಕೊಂಡಿರುವ ಆಶಾ ಕಾರ್ಯಕರ್ತೆಯರ ಆರೋಗ್ಯ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು ಎಂದು ವೈದ್ಯ ಡಾ. ರಾಘವೇಂದ್ರಜೋಷಿ ತಿಳಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ ಉಪನಿರ್ದೇಶಕ ಮಹಾಲಿಂಗಪ್ಪ ವಿ.ನೆಗಳೂರು, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೆಟ್ಟಸ್ವಾಮೇಗೌಡ ಮತ್ತಿತರರರು ಉಪಸ್ಥಿತರಿದರು.