

ದೊಡ್ಡಬಳ್ಳಾಪುರ: ಹೂವು ಬೆಳೆಗಾರರ ಹಿತದೃಷ್ಟಿಯಿಂದ 30 ಎಕರೆ ಜಾಗದಲ್ಲಿ ಪರ್ಯಾಯವಾಗಿ ಹೂವಿನ ಮಾರುಕಟ್ಟೆ ನಿರ್ಮಿಸಲು ಚಿಂತಿಸಲಾಗಿದೆ ಎಂದು ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಬುಧವಾರ ಭೇಟಿ ನೀಡಿ ರೈತರೊಂದಿಗೆ ಮಾತನಾಡಿದರು.
ರೈತರು ತರಕಾರಿ, ಹಣ್ಣು, ಹೂವುಗಳನ್ನು ನೇರವಾಗಿ ಬೆಂಗಳೂರು ನಗರದಲ್ಲಿ ಹಾಪ್‌ಕಾಮ್ಸ್‌ಗೆ ಮಾರಾಟ ಮಾಡಬಹುದು. ಚೆಕ್‌ಪೋಸ್ಟ್‌ನಲ್ಲಿ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಅನುವು ಮಾಡಿಕೊಡಲಾಗಿದೆ. ಇಂದಿನಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಗೆ ಕಾರ್ಮಿಕ ಇಲಾಖೆಯಿಂದ 750 ರೂ. ಮೌಲ್ಯದ ತಲಾ 20 ಸಾವಿರ ದಿನಸಿ ಸಾಮಗ್ರಿ ಕಿಟ್‌ಗಳನ್ನು ನೀಡಲಾಗುತ್ತಿದೆ. ಇದನ್ನು ವಲಸೆ ಹಾಗೂ ಕೂಲಿ ಕಾರ್ಮಿಕರಿಗೆ ಆಯಾ ಜಿಲ್ಲಾಧಿಕಾರಿಗಳು ವಿತರಿಸಲಿದ್ದಾರೆ ಎಂದರು.
ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರು ಅಂತರ ಕಾಯ್ದುಕೊಂಡು ಪಡಿತರ ಪಡೆಯಬೇಕು. ಹೆಚ್ಚಿನ ದರ ಪಡೆಯುತ್ತಿರುವ ಅಂಗಡಿಗಳ ಪರವಾನಗಿ ರದ್ದು ಪಡಿಸಲಾಗುವುದು ಎಂದು ಎಚ್ಚರಿಸಿದರು.
ಹೂವು ಬೆಳೆಗಾರರ ಬಡ್ಡಿ ಮನ್ನಾ ಹಾಗೂ ಪ್ರೋತ್ಸಾಹಧನ ಬೇಡಿಕೆಯನ್ನು ಸಿಎಂ ಗಮನಕ್ಕೆ ತರಲಾಗುವುದು. ಇಲ್ಲಿನ ಮಾರುಕಟ್ಟೆ ಸಮಯವನ್ನು ಬೆಳಗಿನ ಜಾವ 4ರಿಂದ 10ರವರೆಗೆ ವಿಸ್ತರಿಸುವ ಬಗ್ಗೆ ಎಪಿಎಂಸಿ ಅಧಿಕಾರಿಗಳು ರೈತರಿಗೆ ಅನುಕೂಲವಾಗುವಂತೆ ತೀರ್ಮಾನ ತೆಗೆದುಕೊಳ್ಳಬೇಕು.
ಎಪಿಎಂಸಿ ವತಿಯಿಂದ ಮಾಸ್ಕ್, ಸ್ಯಾನಿಟೈಸರಿ ಸೇರಿ ಸ್ವಚ್ಛತಾ ಪರಿಕರ ವಿತರಿಸಬೇಕು ಎಂದು ಸೂಚಿಸಿದರು.
ಶಾಸಕ ಟಿ. ವೆಂಕಟರಮಣಯ್ಯ, ಜಿಪಂ ಅಧ್ಯಕ್ಷೆ ಜಯಮ್ಮ, ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಕೃಷಿ ಮಾರಾಟ ಇಲಾಖೆ ನಿರ್ದೇಶಕ ಕರೀಗೌಡ, ತಹಸೀಲ್ದಾರ್ ಶಿವರಾಜು, ಪೌರಾಯುಕ್ತ ಮಂಜುನಾಥ್, ಡಿವೈಎಸ್‌ಪಿ ರಂಗಪ್ಪ ಇತರರು ಇದ್ದರು.
ಇಂದಿರಾ ಕ್ಯಾಂಟೀನ್ ಪರಿಶೀಲನೆ: ದೊಡ್ಡಬಳ್ಳಾಪುರ ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿದ ಸಚಿವ ಎಸ್.ಟಿ. ಸೋಮಶೇಖರ್, ನಂತರ ನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಶುಚಿತ್ವ, ನೀರು ಹಾಗೂ ಆಹಾರ ಧಾನ್ಯ ಪರಿಶೀಲಿಸಿದರು. ಬಳಿಕ ವಲಸೆ ಕಾರ್ಮಿಕರಿಗೆ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಿರುವ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯವನ್ನೂ ಪರಿಶೀಲಿಸಿ ಕಾರ್ಮಿಕರಿಗೆ ಹಣ್ಣು ವಿತರಿಸಿದರು.