ಹೆಗ್ಗಡೆಮನೆಯಲ್ಲಿ ಆಸ್ತಿ ಇದ್ದರೂ ಅನಾಥಭಾವ

24spt6-
Published on

ಹಿರಿಕರ ರವಿ ಸೋಮವಾರಪೇಟೆ


ಐತಿಹಾಸಿಕ ಹಿನ್ನೆಲೆಯುಳ್ಳ, ಸುಮಾರು ೮೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಪುಷ್ಪಗಿರಿ ತಪ್ಪನಲ್ಲಿರುವ ಹೆಗ್ಗಡೆಮನೆ ಗ್ರಾಮದ ನಿವಾಸಿಗಳು ಆಸ್ತಿಯಿದ್ದರೂ ಅನಾಥರಂತೆ ಬದುಕಬೇಕಾಗಿದೆ.


ರಾಜ್ಯದ ನಂ.೧ ದಿನಪತ್ರಿಕೆ ವಿಜಯವಾಣಿ ಗ್ರಾಮ ಸಂಚಾರ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ತಮ್ಮ ನೋವನ್ನು ತೋಡಿಕೊಂಡರು. ಸುತ್ತಲೂ ಅರಣ್ಯ ಪ್ರದೇಶವನ್ನು ಹೊಂದಿದ್ದು ಮಧ್ಯದಲ್ಲಿ ಗ್ರಾಮವಿದೆ. ಪ್ರಸ್ತುತ ಪುಷ್ಪಗಿರಿ ವನ್ಯಧಾಮ ಸೂಕ್ಷ್ಮ ಪರಿಸರ ವಲಯವಾಗಿರುವುದರಿಂದ ಈ ಗ್ರಾಮದ ರೈತರು ಆತಂಕದಿಂದ ಬದುಕುವಂತಾಗಿದೆ. ಗ್ರಾಮದಲ್ಲಿ ೩೦ ಕುಟುಂಬಗಳು ವಾಸವಾಗಿದ್ದು, ಬಹುತೇಕ ಕುಟುಂಬಗಳಿಗೆ ಆಸ್ತಿ ಹಕ್ಕುಪತ್ರಗಳಿಲ್ಲದೆ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.


ಪ್ರತಿ ಕುಟುಂಬದವರಿಗೆ ೩ರಿಂದ ೫ ಎಕರೆ ಜಾಗವಿದ್ದು ಬದುಕಿಗಾಗಿ ಕೃಷಿ ಮಾಡವಂತಾಗಿದೆ. ತರಕಾರಿ, ಬಾಳೆ, ಹಸಿಮೆಣಸು ಬೆಳೆಯುತ್ತಾರೆ. ಇದುವರೆಗೆ ತಮ್ಮ ಆಸ್ತಿಗೆ ಹಕ್ಕುಪತ್ರವಿಲ್ಲದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಅರಣ್ಯ ಇಲಾಖೆಯವರು ರೈತರ ಜಾಗವನ್ನು ಅರಣ್ಯ ಎಂದು ಹೇಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.


ಗ್ರಾಮಕ್ಕೆ ವಾರ್ಷಿಕವಾಗಿ ೩೦೦ರಿಂದ ೫೦೦ ಇಂಚಿನಷ್ಟು ಮಳೆ ಸುರಿಯುತ್ತದೆ. ಕೊಡಗು ಜಿಲ್ಲೆಯ ಮಟ್ಟಿಗೆ ಅತೀ ಹೆಚ್ಚು ವಾರ್ಷಿಕ ಮಳೆ ಬೀಳುವ ಗ್ರಾಮವೆಂದೇ ಕರೆಸಿಕೊಳ್ಳುತ್ತಿದೆ. ಇಲ್ಲಿನ ನಿವಾಸಿಗಳು ಭತ್ತ, ತರಕಾರಿ ಬೆಳೆದು ಕಾಡುಪ್ರಾಣಿಗಳು ತಿಂದು ಉಳಿಸಿದ ಕೃಷಿ ಫಸಲನ್ನು ಪಡೆದು ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ.


ಈ ಹಿಂದೆ ಇದ್ದ ಏಲಕ್ಕಿ ತೋಟಗಳು ಕಟ್ಟೆರೋಗಕ್ಕೆ ನಾಶವಾಗಿವೆ. ಅಕಾಲಿಕ ಮಳೆಯಿಂದ ಕಾಫಿ ಫಸಲು ಕೈಸೇರುತ್ತಿಲ್ಲ. ಭತ್ತ ಕೃಷಿಯೂ ಲಾಭದಾಯಕವಾಗಿಲ್ಲ. ಇಳುವರಿಯಿಲ್ಲ. ಬೆಲೆಯೂ ಇಲ್ಲ. ಊಟಕೋಸ್ಕರ ಭತ್ತ ಕೃಷಿ ಮಾಡುತ್ತೇವೆ ಎಂದು ಕೃಷಿಕರು ಹೇಳಿದರು. ಲಾಭವಿಲ್ಲದ ಕೃಷಿ ಜೀವನ ಕಷ್ಟಕರವಾದ ಕಾರಣ ಯುವಕ, ಯುವತಿಯರು ಗ್ರಾಮ ತೊರೆದು, ನೌಕರಿಗಾಗಿ ನಗರಗಳಿಗೆ ಸೇರಿದ್ದಾರೆ. ವಯಾಸ್ಸಾದವರು ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಾಲೇಜು ಶಿಕ್ಷಣಕ್ಕೆ ೩೦ ಕಿ.ಮೀ. ದೂರದ ಸೋಮವಾರಪೇಟೆ ಪಟ್ಟಣಕ್ಕೆ ಬರಬೇಕಾಗಿದೆ. ಸೂಕ್ತವಾದ ಸಂಚಾರ ವ್ಯವಸ್ಥೆಯಿಲ್ಲ.


ಅತೀಹೆಚ್ಚು ಮಳೆಹಾನಿಯಿಂದ ಫಸಲು ನಷ್ಟವಾಗುವುದು ಇದೇ ಗ್ರಾಮದಲ್ಲಿ. ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೆ, ಕಂದಾಯ ಇಲಾಖೆ ಆಸ್ತಿಯ ಹಕ್ಕುಪತ್ರ ಕೇಳುತ್ತದೆ. ಆದರೆ ಗ್ರಾಮದಲ್ಲಿರುವ ಬಹುತೇಕ ಭೂಮಿ ಸರ್ಕಾರದ ಸಿ ಮತ್ತು ಡಿ ಜಾಗವಾಗಿರುತ್ತದೆ. ಹಕ್ಕುಪತ್ರಕ್ಕಾಗಿ ಕಳೆದ ಐವತ್ತು ವರ್ಷಗಳಿಂದ ಇಲ್ಲಿನ ನಿವಾಸಿಗಳು ಬೇಡಿಕೆ ಇಡುತ್ತಿದ್ದಾರೆ. ಆದರೆ ಸರ್ಕಾರ ಹಕ್ಕುಪತ್ರಗಳನ್ನು ನೀಡಿಲ್ಲ ಎಂದು ನಿವಾಸಿಗಳು ನೊಂದು ನುಡಿದರು.


ಪ್ರಕೃತಿಯ ತವರೂರು ಎಂದೇ ಕರೆಸಿಕೊಂಡಿರುವ ಹೆಗ್ಗಡಮನೆ ಗ್ರಾಮವನ್ನು ಪ್ರವಾಸೋಧ್ಯಮ ಇಲಾಖೆ ದತ್ತು ಪಡೆದು ಅಭಿವೃದ್ಧಿಗೊಳಿಸಬೇಕಾಗಿದೆ. ಅಲ್ಲಿನ ಕೃಷಿಕರಿಗೆ ಆರ್ಥಿಕ ಸಹಾಯ ಮಾಡಿ, ಸ್ವಯಂ ಉದ್ಯೋಗ ಮಾಡಲು ಪ್ರೋತ್ಸಾಹ ನೀಡಬೇಕಾಗಿದೆ.


ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಶಾಂತಮಲ್ಲಿಕಾಜುನ ದೇವಾಲಯವಿದೆ. ಇಲ್ಲಿಂದ ಪುಷ್ಪಗಿರಿ ಬೆಟ್ಟಕ್ಕೆ ಚಾರಣ ನಡೆಯುತ್ತದೆ. ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದೆ. ೮೦೦ ವರ್ಷಗಳ ಹಿಂದೆ ದೇವಸನ್ನಿದಿ ಇತ್ತು ಎನ್ನಲಾಗಿದೆ. ದೇವಾಲಯದ ಪಕ್ಕದಲ್ಲೇ ಸಂಪಿಗೆ ಮರವಿದ್ದು ಅದರ ದಪ್ಪ ಮತ್ತು ಎತ್ತರವನ್ನು ಆಳತೆ ಮಾಡಿರುವ ಸಸ್ಯಶಾಸ್ತ್ರಜ್ಞರು ೭೦೦ ರಿಂದ ೮೦೦ ವರ್ಷವಾಗಿರಬಹುದು ಎಂದು ಹೇಳಿದ್ದಾರೆ. ಈ ಆಧಾರದಲ್ಲೇ ಗ್ರಾಮಕ್ಕೆ ಐತಿಹಾಸಿಕ ಹಿನ್ನೆಲೆಯಿದೆ ಎಂದು ಗ್ರಾಮಸ್ಥರು ಹೇಳಿದರು.

ರಸ್ತೆ ಬಂತು.. ಬದುಕು?
ಸೌಲಭ್ಯ ವಂಚಿತ ಹೆಗ್ಗಡಮನೆ ಗ್ರಾಮದಲ್ಲಿ ಒಂದು ಕೋಟಿ ರೂ. ವೆಚ್ಚದ ರಸ್ತೆ ಕಾಂಕ್ರೀಟಿಕರಣವಾಗಿದೆ. ಪ್ರಕೃತಿದತ್ತವಾಗಿ ನೀರು ಸಿಗುತ್ತದೆ. ವಿದ್ಯುತ್ ಸೌಲಭ್ಯವಿದೆ. ಆದರೆ ಬದುಕು ಕಷ್ಟಕರವಾಗಿದೆ. ಮೊಬೈಲ್ ಟವರ್‌ಗಳಿಲ್ಲದೆ, ಸಂಪರ್ಕ ವ್ಯವಸ್ಥೆಗೆ ಪರದಾಡುತ್ತಿದ್ದಾರೆ.


ಅಕಾಲಿಕ ಮಳೆ, ಕಾಡುಪ್ರಾಣಿಗಳಿಂದ ಕೃಷಿ ನಷ್ಟವಾಗುತ್ತಿದೆ. ಗ್ರಾಮಸ್ಥರು ಹೋಂ ಸ್ಟೇ ಮತ್ತು ರೆಸಾರ್ಟ್‌ಗಳನ್ನು ನಡೆಸಲು ಸರ್ಕಾರ ಬಡ್ಡಿ ರಹಿತ ದೀರ್ಘಾವದಿ ಸಾಲ ನೀಡಬೇಕು. ಗ್ರಾಮಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ, ಪ್ರತಿಕುಟುಂಬಕ್ಕೆ ಸಹಾಯಧನ ವಿತರಿಸಬೇಕು. ಸರ್ಕಾರದ ಸೌಲಭ್ಯ ಸಿಗದಿದ್ದರೆ, ಬದುಕು ಕಷ್ಟಕರವಾಗಿದೆ. ಸಿ ಮತ್ತು ಡಿ ಭೂಮಿಗೆ ಹಕ್ಕುಪತ್ರ ನೀಡಲೇಬೇಕು.
-ಜೆ.ಬಿ.ತಿಮ್ಮಯ್ಯ, ಉಪಾಧ್ಯಕ್ಷರು, ಹೆಗ್ಗಡಮನೆ ಗ್ರಾಮಾಭಿವೃದ್ಧಿ ಮಂಡಳಿ,

ನನ್ನ ಮೂರು ಎಕರೆ ಕೃಷಿ ಭೂಮಿಯನ್ನು ಅರಣ್ಯ ಇಲಾಖೆಯವರು ಸುಳ್ಳು ಭರವಸೆ ನೀಡಿ, ತಮ್ಮ ವಶಕ್ಕೆ ತೆಗೆದುಕೊಂಡರು. ೩ ಎಕರೆ ಸಿ ಮತ್ತು ಡಿ ಜಾಗವನ್ನು ಅಳೆದು ಕೊಡುತ್ತೇವೆ ಎಂದು ಸುಳ್ಳು ಹೇಳಿದರು. ಕಳೆದ ಹತ್ತು ವರ್ಷದಿಂದ ಹೋರಾಟ ಮಾಡುತ್ತಿದ್ದೇನೆ. ಅರಣ್ಯ ಇಲಾಖೆಯವರು ಪರ್ಯಾಯ ಜಾಗವನ್ನು ಕೊಟ್ಟಿಲ್ಲ. ಬಡ ರೈತರಿಗೆ ಮೋಸ ಮಾಡುವುದು ಸರಿಯಿಲ್ಲ. ಕೂಡಲೆ ಜಾಗ ಕೊಡಬೇಕು.
-ಎಂ.ಎಚ್.ಲೀಲಾ, ರೈತ ಮಹಿಳೆ, ಹೆಗ್ಗಡಮನೆ ಗ್ರಾಮ

ಭತ್ತ, ಕಾಫಿ ನಷ್ಟವಾಗಿದ್ದ ಸಂದರ್ಭ ಜೇನುಕೃಷಿಯಿಂದ ಬದುಕು ಸಾಗಿಸುತ್ತಿದ್ದೇವು. ಈಗ ಜೇನುಬೆಕ್ಕುಗಳು ಜೇನು ಪೆಟ್ಟಿಗೆಗಳನ್ನು ಕೆಡವಿ ಜೇನು ತಿನ್ನುತ್ತಿವೆ. ಅದರಲ್ಲೂ ದೊಡ್ಡಮಟ್ಟದ ನಷ್ಟವಾಗುತ್ತಿದೆ. ಪರಿಹಾರವು ಸಿಗುತ್ತಿಲ್ಲ. ಜೇನಿಗೆ ರೋಗ ಬಂದು ನಷ್ಟವಾದರೂ ಕೇಳುವವರು ಇಲ್ಲದಂತಾಗಿದೆ. ನಮ್ಮ ಆಸ್ತಿಯನ್ನು ನಮ್ಮ ಹೆಸರಿಗೆ ಮಾಡಿಕೊಡಬೇಕು. ಜನಪ್ರತಿನಿಧಿ ಸಹಾಯ ಮಾಡಬೇಕು.
-ಗಣೇಶ್ ಕುಮಾರ್, ಕೃಷಿಕ. ಹೆಗ್ಗಡಮನೆ ಗ್ರಾಮ

ಹೆಗ್ಗಡಮನೆ ಗ್ರಾಮದ ಸರಹದ್ದನ್ನು ಅರಣ್ಯ ಇಲಾಖೆ ತಮ್ಮ ವಶಕ್ಕೆ ತೆಗದುಕೊಂಡಿದೆ. ರೈತರ ಶೋಷಣೆ ನಿಲ್ಲುವುದು ಯಾವಾಗ. ಕೃಷಿ ಮಾಡುವುದಕ್ಕೆ ಮಾತ್ರ ಭೂಮಿಯನ್ನು ಉಪಯೋಗಿಸುತ್ತೇವೆ. ಆಹಾರ ಬೆಳೆಗಳ ಉತ್ಪಾದನೆಯಾಗದಿದ್ದರೆ ದೇಶದ ಜನ ಏನನ್ನು ತಿನ್ನಬೇಕು. ತರಕಾರಿ ಬೆಳೆಯಲು ಹನಿ ನೀರಾವರಿಗೆ ಸರ್ಕಾರ ಸೌಲಭ್ಯ ಒದಗಿಸಬೇಕು.
-ಎಂ.ಕೆ.ಪೂವಯ್ಯ, ಕೃಷಿಕ, ಹೆಗ್ಗಡಮನೆ ಗ್ರಾಮ

ಹೆಗ್ಗಡಮನೆ ಗ್ರಾಮದಲ್ಲಿರುವ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ದಕ್ಷಿಣ ಭಾರತದಲ್ಲೇ ಪವಿತ್ರಸ್ಥಳವೆಂದೆ ಗುರುತಿಸಲಾಗಿದೆ. ಋಷಿಮುನಿಗಳು ಘೋರ ತಪಸ್ಸು ಮಾಡಿದ ಸ್ಥಳವಾಗಿದೆ. ಕಳೆದ ೯ ವರ್ಷದ ಹಿಂದೆ ಉತ್ತರ ಭಾರತದ ಸಾದ್ವಿಗಳಿಂದ ಲೋಕಕಲ್ಯಾಣಕ್ಕಾಗಿ ೫ ದಿನದ ಯಾಗ ಶ್ರೀಶಾಂತಮಲ್ಲಿಕಾರ್ಜುನ ಪವಿತ್ರ ಭೂಮಿಯಲ್ಲಿ ನಡೆದಿತ್ತು. ಶಿವರಾತ್ರಿಯಂದು ಪುಜೋತ್ಸವ ನಡೆಯಲಿದೆ.
-ಟಿ.ಪಿ.ಚಂಗಪ್ಪ, ಅಧ್ಯಕ್ಷರು, ಶ್ರೀ ಶಾಂತಮಲ್ಲಿಕಾರ್ಜುನ ದೇವಾಲಯ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net