ಸಮಾಜಕ್ಕೆ ಕೊಡುಗೆ ನೀಡಲು ಬಯಸುವವರು ರಕ್ತದಾನ ಮಾಡಿ : ಡಿಎಚ್‌ಒ ಡಾ.ಪಿ.ಸಿ. ಕುಮಾರಸ್ವಾಮಿ

blood donor day
Published on

ಮೈಸೂರು: ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕು ಎಂಬ ಬಯಕೆ ಪ್ರತಿಯೊಬ್ಬರಿಗೂ ಇರುತ್ತದೆ. ಈ ರೀತಿ ಬಯಸುವವರು ರಕ್ತದಾನ ಮಾಡಿ ಜನರ ಜೀವ ಉಳಿಸಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ಕರೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಮೈಸೂರು ವಿಶ್ವ ವಿದ್ಯಾಲಯದ ಸಮಾಜ ಕಾರ್ಯ ಅಧ್ಯಯನ ವಿಭಾಗ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗ, ಕೆ.ಆರ್. ಆಸ್ಪತ್ರೆಯ ರಕ್ತನಿಧಿ ಕೇಂದ್ರ, ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ವತಿಯಿಂದ ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಿಶ್ವ ರಕ್ತದಾನಿಗಳ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ 35 ಲಕ್ಷ ಜನಸಂಖ್ಯೆ ಇದ್ದು, ರಕ್ತದ ಅವಶ್ಯಕತೆ ತುಂಬಾ ಇದೆ. ಸಾಕಷ್ಟು ಕಾಯಿಲೆಗಳಿಗೆ, ಶಸ್ತ್ರ ಚಿಕಿತ್ಸೆ ಸಂದರ್ಭ ರಕ್ತದ ಅವಶ್ಯಕತೆ ಎದುರಾಗುತ್ತದೆ. ರಕ್ತಕ್ಕೆ ಪರ್ಯಾಯ ವಸ್ತು ಇಲ್ಲದ ಹಿನ್ನೆಲೆಯಲ್ಲಿ ದಾನಿಗಳು ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ರಕ್ತದಾನದ ಬಗ್ಗೆ ಅರಿವು ಮೂಡಿಸಲು ವಿಶ್ವ ರಕ್ತದಾನಿಗಳ ದಿನಾಚರಣೆ ಹಮ್ಮಿಕೊಳ್ಳಲಾಗುತ್ತಿದೆ. ದಾನಗಳಲ್ಲಿ ರಕ್ತದಾನ ಅತ್ಯಂತ ಮುಖ್ಯವಾದದ್ದು. ರಕ್ತದಾನ ಮೂಲಕ ಜನರ ಜೀವವನ್ನು ಉಳಿಸಬಹುದು ಎಂದು ಹೇಳಿದರು.

ಪ್ರತಿವರ್ಷ ದೇಶದಲ್ಲಿ 5 ಕೋಟಿ ಯೂನಿಟ್ ರಕ್ತದ ಅವಶ್ಯಕತೆ ಇದೆ. ಆದರೆ, ಪ್ರಸ್ತುತ ದೊರೆಯುತ್ತಿರುವುದು 2.5 ಕೋಟಿ ಯೂನಿಟ್ ರಕ್ತ ಮಾತ್ರ. ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ರಕ್ತದ ಕೊರತೆ ಕಂಡು ಬರುತ್ತಿದ್ದು, ಈ ಕೊರತೆ ನೀಗಿಸಲು ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಮನವಿ ಮಾಡಿದರು.

ಲಯನ್ಸ್ ಬ್ಲಡ್ ಸೆಂಟರ್ ಜೀವಧಾರದ ಮ್ಯಾನೇಜಿಂಗ್ ಟ್ರಸ್ಟಿ ಎಸ್.ಇ. ಗಿರೀಶ್ ಮಾತನಾಡಿ, ದೇಶದಲ್ಲಿ ಶೇ.20 ರಿಂದ 30 ರಷ್ಟು ರಕ್ತದ ಕೊರತೆ ಇದೆ. ಮಧ್ಯಪ್ರದೇಶದ ಇಂದೋರ್ ನಗರ ಹೊರತು ಪಡಿಸಿ ದೇಶದ ಉಳಿದ ಎಲ್ಲ ಭಾಗಗಳಲ್ಲೂ ರಕ್ತದ ಕೊರತೆ ಇದೆ. ಇಂದೋರ್‌ನಲ್ಲಿ ಒಬ್ಬ ರೋಗಿಗೆ ರಕ್ತ ನೀಡಲು ಕನಿಷ್ಠ 10 ಜನರು ಸಿಗುತ್ತಾರೆ. ಅಂತಹ ವಾತಾವರಣವನ್ನು ಮೈಸೂರಿನಲ್ಲಿ ನಿರ್ಮಾಣ ಮಾಡಲು ಪ್ರಯತ್ನ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ರಕ್ತದ ಕೊರತೆ ಆಗದಂತೆ ನೋಡಿಕೊಳ್ಳಲು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭ ಅತಿ ಹೆಚ್ಚು ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಿದ ನಗರದ ಕ್ರೈಸ್ಟ್ ಕಾಲೇಜು, ಸೇಪಿಯೆಂಟ್ ಕಾಲೇಜು, ಸಂತ ಫಿಲೋಮಿನ ಕಾಲೇಜು, ಅಪ್ಲಾಂಟಿಕ್ ಅಪೇರಲ್ಸ್, ಕಾರ್ನಿವಲ್ ಕ್ಲಾತಿಂಗ್, ಜಿಎಸ್‌ಎಸ್‌ಎಸ್ ಕಾಲೇಜು, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು, ಯುವರಾಜ ಕಾಲೇಜು, ಕೆ.ಆರ್. ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು. ರಕ್ತದಾನಿಗಳಾದ ಆಶೀಶ್, ಮಹೇಶ್, ಮನು, ಬಸವರಾಜು, ಸಂತೋಷ್ ಸೆಬಾಸ್ಟಿನ್ ರಿಚರ್ಡ್ ಲೋಬೊ, ಆನಂದ್, ಹರೀಶ್ ಕುಮಾರ್, ಡಾ. ಗಿರೀಶ್, ಸ್ನೇಕ್ ಕೋಬ್ರಾ ಕುಮಾರ್, ಮುದಾಸಿರ್ ಷರೀಫ್, ವಿನೋದ್ ಬಿದರಗೂಡು, ಕೃಷ್ಣ, ಫರನಾ, ಅಶ್ವಿನಿ, ಎ.ಎಲ್. ಸಂಜಯ್, ಡಾ.ಎಂ.ಎ. ಮನು ಮಹೇಶ್, ಶ್ವೇತಾ ಎಸ್. ಭಾರದ್ವಾಜ್, ಎಸ್. ವಿನೂತಾ ಶ್ರೀಹರಿ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕಾಧಿಕಾರಿ ಡಾ.ಮೊಹಮ್ಮದ್ ಸಿರಾಜ್ ಅಹಮದ್, ಕೆ.ಆರ್. ಆಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ.ಕುಸುಮಾ, ಮೈಸೂರು ವಿಶ್ವ ವಿದ್ಯಾಲಯದ ಸಾಮಾಜಿಕ ಅಧ್ಯಯನ ವಿಭಾಗ ಮುಖ್ಯಸ್ಥ ಡಾ. ಚಂದ್ರಮೌಳಿ, ಪ್ರಾಧ್ಯಾಪಕಿ ಡಾ.ಎಚ್.ಪಿ. ಜ್ಯೋತಿ, ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ ವಿಭಾಗದ ಮುಖ್ಯಸ್ಥೆ ಡಾ. ಸಪ್ನ, ಲಯನ್ಸ್ ಬ್ಲಡ್ ಸೆಂಟರ್ ಜೀವಧಾರದ ಎಕ್ಸಿಕ್ಯೂಟಿವ್ ಟ್ರಸ್ಟಿ ಸಿ.ಜಿ. ಮುತ್ತಣ್ಣ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net