ಸಿಂಧೂರವನ್ನು ಮುಟ್ಟಿದವರಿಗೆ ತಕ್ಕಶಾಸ್ತಿ: ಬಿವೈಆರ್

byr
ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ವಿಜಯ ತಿರಂಗಾ ಯಾತ್ರೆಯಲ್ಲಿ ಬಿ.ವೈ.ರಾಘವೇಂದ್ರ ಮಾತನಾಡಿದರು. ಪಟ್ಟಾಭಿರಾಮ್, ಪ್ರೊ.ಪುನಿತ್‌ಕುಮಾರ್, ಶೋಭಾ ಇದ್ದರು.
Published on

ಶಿವಮೊಗ್ಗ: ಭಾರತದ ಸಿಂಧೂರವನ್ನು ಮುಟ್ಟಿದರೆ ವಿಶ್ವ ಭೂಪಟದಿಂದಲೇ ಮಾಯವಾಗುವುದು ನಿಶ್ಚಿತ ಎಂಬ ಸಂದೇಶವನ್ನು ನಮ್ಮ ಸೈನಿಕರು ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನಕ್ಕೆ ನೀಡಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ವಿಜಯ ತಿರಂಗಾ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಮಾತೆಯರ ಸಿಂಧೂರಕ್ಕಾಗಿ ಮತ್ತು ದೇಶದ ಭವಿಷ್ಯಕ್ಕಾಗಿ ಚಳಿ, ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ ಗಡಿ ಕಾಯುತ್ತಿರುವ ಸೈನಿಕರಿಗೆ ಧೈರ್ಯ ತುಂಬಲು ದೇಶಾದ್ಯಂತ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಆಪರೇಷನ್ ಸಿಂಧೂರದಲ್ಲಿ ಹುತಾತ್ಮರಾದ ಸೈನಿಕರಿಗೆ, ದೇಶಕ್ಕೆ ವಿಜಯ ತಂದುಕೊಟ್ಟ ಸೈನಿಕರಿಗೆ ಮತ್ತು 26 ಪುರುಷರನ್ನು ಕಳೆದುಕೊಂಡ ಕುಟುಂಬಗಳಿಗೆ ವಿಶ್ವಾಸ ತುಂಬಲು ಈ ಯಾತ್ರೆ ನಡೆಸಲಾಗಿದೆ. ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ನೂರಾರು ಮಂದಿ 750 ಮೀಟರ್ ಉದ್ದದ ರಾಷ್ಟ್ರಧ್ವಜದೊಂದಿಗೆ ಹೆಜ್ಜೆ ಹಾಕಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

ಮೋದಿ ಹೆಡ್‌ಲೈನ್ ಮಾತ್ರ ಎಂದು ಕೆಲವರು ಲೇವಡಿ ಮಾಡುತ್ತಿದ್ದರು. ನಮಗೆ ಡೆಡ್‌ಲೈನ್ ಕೂಡ ಗೊತ್ತಿದೆ ಎಂದು ಈಗ ಪ್ರಧಾನಿ ನರೇಂದ್ರ ಮೋದಿ ತೋರಿಸಿದ್ದಾರೆ. ನಮ್ಮ ದೇಶದ ನೀರು ಕುಡಿದು, ವಿಷ ಕಕ್ಕುವ ದೇಶದ್ರೋಹಿಗಳಿಗೆ ಮತ್ತು ಒಳಗಿನ ಹಿತಶತ್ರುಗಳಿಗೆ ಸರಿಯಾದ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

ಸಾವಿರಾರು ನಾಗರಿಕರು ಮತ್ತು ಸೈನಿಕರನ್ನು ಕಳೆದುಕೊಂಡಾಗ 2008ರಿಂದ 2014ರವರೆಗೆ ದೇಶವನ್ನು ಆಳಿದವರು ಶಾಂತಿಮಂತ್ರ ಜಪಿಸುತ್ತಿದ್ದರು. ಸಿಎಂ ಸಿದ್ದರಾಮಯ್ಯ, ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ಸೈನಿಕರ ಬಗ್ಗೆ ಹಗುರವಾಗಿ ಮಾತನಾಡಿದ್ದರು. ತಿರಂಗಾ ಯಾತ್ರೆ ಮೂಲಕ ಅವರ ಬಾಯಿ ಮುಚ್ಚಿಸುವ ಕೆಲಸವಾಗಿದೆ ಎಂದರು.

ಆರ್‌ಎಸ್‌ಎಸ್ ದಕ್ಷಿಣಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಡಾ. ಧನಂಜಯ ಸರ್ಜಿ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ವಿವಿಧ ಹಂತಗಳ ಪದಾಧಿಕಾರಿಗಳು, ವಿಎಚ್‌ಪಿ, ಬಜರಂಗದಳದ ಪ್ರಮುಖರು, ನಾಗರಿಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net