

ಕೊಟ್ಟೂರು: ಜೇಡರ ದಾಸಿಮಯ್ಯ ವಚನಗಳ ಮೂಲಕ ದೈವತ್ವದಿಂದ ಜೀವಿಸಿ ದೇವರ ದಾಸಿಮಯ್ಯನಾದ ಎಂದು ಕೊಟ್ಟೂರು ಹಿರೇಮಠದ ಯೋಗಿರಾಜೇಂದ್ರ ಶಿವಾಚಾರ್ಯರು ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯ ಮಹಾತ್ಮಗಾಂಧಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊಪ್ಪಳ ಬಸವರಾಜಪ್ಪ ಶಿವನಿಗೆ ವಸ್ತ್ರ ನೇಯ್ದುಕೊಟ್ಟಿದ್ದರಿಂದ ನಾವು ನೇಕಾರರಾದೆವು. ನಾವೇ ನಿಜವಾದ ವೀರಶೈವರು. ದೇವರ ದಾಸಿಮಯ್ಯನ ಸವಾಲು ಸ್ವೀಕರಿಸಿದ ದುಗ್ಗಳೆ ದಾಸಿಮಯ್ಯ ಅವರನ್ನು ಲಗ್ನವಾದಳು ಎಂದರು.
ತಹಸೀಲ್ದಾರ್ ಜಿ.ಕೆ.ಅಮರೇಶ ಮಾತನಾಡಿ, ದಾಸಿಮಯ್ಯನ ವಚನಗಳು ಚಿಕ್ಕದಾಗಿದ್ದರೂ ಸಾಮಾಜಿಕ ಕ್ರಾಂತಿಯನ್ನು ಮಾಡಿವೆ. ಎಲ್ಲರಿಗೂ ಸಾಮಾನ ಹಕ್ಕು, ಬದುಕನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದರು.
ಪತ್ರಕರ್ತ ಉಜ್ಜಿನಿ ರುದ್ರಪ್ಪ ಮಾತನಾಡಿ, ದೇವರ ದಾಸಿಮಯ್ಯನ ವಚನಗಳನ್ನು ಮಕ್ಕಳಿಗೆ ತಿಳಿಸುವ ಮೂಲಕ ಮುಂದಿನ ಪೀಳಿಗೆಗೆ ದಾಸಿಮಯ್ಯನ ಚರಿತ್ರೆ ಪ್ರಸಾರವಾಗಬೇಕು ಎಂದರು.
ಉಪ ತಹಸೀಲ್ದಾರ್ ಅನ್ನದಾನೇಶ, ಕಂದಾಯ ನಿರೀಕ್ಷ ಹಾಲಸ್ವಾಮಿ, ಸಮಾಜ ಸಮಾಜದ ಅಧ್ಯಕ್ಷರಾದ ರಾಂಪುರ ಮೂಗಣ್ಣ, ರಾಜೀವ್, ರಾಂಪುರ ಬಸವರಾಜ್, ಗುರುಬಸಪ್ಪ, ಗಂಜಿ ಪ್ರವೀಣ, ಮಾಮನಿ ವೀರಭದ್ರಪ್ಪ, ಬಿ.ಶಂಕ್ರಪ್ಪ, ಬಾಚೇನಹಳ್ಳಿ ಗುರುಬಸವರಾಜ, ಹಳ್ಳಿ ಕೊಟ್ರೇಶ ಇತರರಿದ್ದರು.