

ಮೈಸೂರು: ರಕ್ತ ನೀಡುವುದು ಎಂದರೆ ಜೀವದಾನ ಮಾಡಿದಷ್ಟೇ ಮಹತ್ವ ಹೊಂದಿದ್ದು, ರಕ್ತದಾನ ಮಾಡಿ ಜೀವ ಉಳಿಸುವವರು ದೇವರಿಗೆ ಸಮನಾಗುತ್ತಾರೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಅಭಿಪ್ರಾಯಪಟ್ಟರು.
ನಗರದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀ ರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ‘ವಿಶ್ವ ರಕ್ತದಾನಿಗಳ ದಿನ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಬಹುತೇಕ ಎಲ್ಲದಕ್ಕೂ ಪರ್ಯಾಯ ವ್ಯವಸ್ಥೆ ಇದೆ. ಆದರೆ ರಕ್ತಕ್ಕೆ ಪರ್ಯಾಯವೇ ಇಲ್ಲ. ಮನುಷ್ಯನಿಗೆ ಕಾಯಿಲೆ ಬಂದರೆ, ಪೌಷ್ಟಿಕಾಂಶದ ಕೊರತೆ ಉಂಟಾದರೆ ಪೂರಕವಾದ ಇಂಜೆಕ್ಷನ್, ಮಾತ್ರೆ, ಸಿರಪ್‌ಗಳನ್ನು ನೀಡಬಹುದು. ಆದರೆ ರಕ್ತಹೀನತೆಯಾದರೆ, ಆಕಸ್ಮಿಕ ಸಂದರ್ಭದಲ್ಲಿ ರಕ್ತಸ್ರಾವವಾದರೆ ಜೀವವನ್ನು ಉಳಿಸಲು ರಕ್ತವನ್ನೇ ನೀಡಬೇಕು. ಇಷ್ಟೂ ತಂತ್ರಜ್ಞಾನ-ವಿಜ್ಞಾನ ಮುಂದುವರಿದಿದ್ದರೂ ರಕ್ತಕ್ಕೆ ಬದಲಿಯಾಗಿ ಯಾವುದೂ ಆವಿಷ್ಕಾರವಾಗಿಲ್ಲ ಎಂದರು.