

ನರಗುಂದ: ಇತ್ತೀಚೆಗಷ್ಟೇ ಸಿಇಟಿ ಪರೀಕ್ಷೆ ಬರೆಯುತ್ತಿದ್ದ ವೇಳೆ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿ ಧರಿಸಿದ್ದ ಯಜ್ಞೋಪವೀತ (ಜನಿವಾರ) ಕತ್ತರಿಸಿ ತೆಗೆಯಲು ಕೆಲಪ್ರಭಾವಿಗಳು ಕುಮ್ಮಕ್ಕು ನೀಡಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಜತೆಗೆ ಚೆಲ್ಲಾಟವಾಡಿರುವ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಶಾಶ್ವತವಾಗಿ ಅಮಾನತು ಮಾಡಬೇಕು ಎಂದು ಬ್ರಾಹ್ಮಣ ಸಮಾಜದ ಹಿರಿಯ ಮುಖಂಡ ಜಿ.ಬಿ. ಕುಲಕರ್ಣಿ ಆಗ್ರಹಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಹಾಗೂ ಬೀದರ್‌ನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಹೋದ ಬ್ರಾಹ್ಮಣವಿದ್ಯಾರ್ಥಿಗಳು ಧರಿಸಿದ್ದ ಜನಿವಾರಗಳನ್ನು ಅಧಿಕಾರಿಗಳು ಕತ್ತರಿಸಿ ಹಾಕಿದ್ದು ಖಂಡನೀಯ. ಇದರಿಂದ ಬ್ರಾಹ್ಮಣ ಸಮಾಜದವರ ಧಾರ್ಮಿಕ ಭಾವನೆಗೆ ತೀವ್ರ ನೋವುಂಟು ತರಿಸಿದೆ. ಸಿಇಟಿ ನಿಯಮಾವಳಿಗಳಲ್ಲಿ ಜನಿವಾರ ತೆಗೆಸುವುದರ ಬಗ್ಗೆ ಯಾವುದೇ ನಿಯಮ, ಉಲ್ಲೇಖಗಳು ಇರುವುದಿಲ್ಲ. ಪರೀಕ್ಷೆಯಲ್ಲಿ ವಿದ್ಯಾರ್ಥಿ ಏನಾದರೂ ಅಕ್ರಮ ತಪ್ಪುಗಳನ್ನು ಮಾಡಿದ್ದರೆ ಆತನ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ, ವಿನಾಕಾರಣ ಬ್ರಾಹ್ಮಣ ಸಮುದಾಯದ ಧಾರ್ಮಿಕ ಭಕ್ತಿ, ಆಚರಣೆಗಳಿಗೆ ಧಕ್ಕೆ ಬರುವಂತೆ ನಡೆದುಕೊಂಡಿರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದರು.
ಧಾರ್ಮಿಕ ಹಕ್ಕು ಮೊಟಕುಗೊಳಿಸುವ ಕೃತ್ಯ ಆತಂಕಕಾರಿಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಮತ್ತು ಸರ್ಕಾರ ಎಚ್ಚರಿಕೆ ವಹಿಸಬೇಕು. ಸಿಇಟಿಯಿಂದ ವಂಚಿತನಾಗಿರುವ ವಿದ್ಯಾರ್ಥಿಗೆ ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು ಎಂದರು.