

ಸೊರಬ: ಯಾವ ವ್ಯಕ್ತಿ ತನ್ನ ಮನೆ, ಮಠ, ಪತ್ನಿ, ಪತಿ, ತನ್ನ ಸಂಸಾರಕ್ಕಾಗಿಯೇ ಬದುಕುತ್ತಾರೋ ಅಂತಹವರನ್ನು ಲೋಕ ಸ್ಮರಿಸುವುದಿಲ್ಲ. ಬದಲಾಗಿ ಯಾರು ಲೋಕದ ಹಿತಕ್ಕಾಗಿ ಬದುಕುತ್ತಾರೋ ಜಗತ್ತು ಅಂತಹವರನ್ನು ಮರೆಯುವುದಿಲ್ಲ ಎಂದು ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಜಡೆ ಹೋಬಳಿಯ ಮೂಡಿ ಮಠದಲ್ಲಿ ಏರ್ಪಡಿಸಿದ್ದ ಶ್ರೀ ಚನ್ನವೀರ ಮಹಾಶಿವಯೋಗಿ, ಶ್ರೀ ಸಿದ್ಧವೀರ ಶಿವಯೋಗಿಗಳ ಮತ್ತು ಅನ್ನದಾನ ಶ್ರೀ ಶಿವಯೋಗಿಗಳ ಸಂಸ್ಮರಣಾ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಮನುಷ್ಯ ಧಾರ್ಮಿಕ ಕಾರ್ಯ, ಪರೋಪಕಾರದ ಸೇವೆಗಳನ್ನು ಮಾಡಬೇಕು. ಜಗತ್ತು ಇಂತಹ ಕಾರ್ಯಗಳನ್ನು ಸದಾಕಾಲವೂ ಸ್ಮರಿಸುತ್ತದೆ. ಅಂತಹ ಕಾರ್ಯಗಳನ್ನು ಚನ್ನವೀರ ಶಿವಯೋಗಿಗಳು ಮಾಡಿದ್ದಾರೆ ಎಂದರು.
ಧರ್ಮ ಕಾರ್ಯಗಳನ್ನು ಮಾಡಿದರೆ ನಮಗೆ ಸ್ವರ್ಗ ಸಿಗುತ್ತದೆ ಎಂದು ಅಲ್ಲಮ ಪ್ರಭುದೇವರು ತಿಳಿಸಿದ್ದಾರೆ. ಶಿವ ಸಾಮೀಪ್ಯ ಹೊಂದಬೇಕಾದರೆ ಈ ಭವ ಬಂಧನದಿಂದ ಮುಕ್ತರಾಗಬೇಕು. ಅಂತಹ ಶಿವಯೋಗವನ್ನು ಮಾಡಬೇಕು. ಧರ್ಮ ಕಾರ್ಯಗಳ ಜತೆಗೆ ಶಿವನ ನಿಲುವನ್ನೂ ಸಾಧಿಸಿದವರು ಶ್ರೀಗಳಾಗಿದ್ದರು. ನ್ಯಾಯ, ನಿಷ್ಠುರವಾಗಿದ್ದ ಶ್ರೀಗಳು ಸತ್ಯವನ್ನು ಖಡಾಖಂಡಿತವಾಗಿ ಹೇಳುತ್ತಿದ್ದರು. ಅಂತಹ ಶ್ರೀಗಳಿಂದ ಈ ಭಾಗದಲ್ಲಿ ಉತ್ತಮ ಸಂಸ್ಕಾರ ಸ್ಥಾಪಿತಗೊಂಡಿದೆ ಎಂದು ಹೇಳಿದರು.
ಮೂಡಿ ಹಾಗೂ ತುರಬಿ ಗುಡ್ಡದ ಮಠಾಧ್ಯಕ್ಷರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಲೌಕಿಕರು ತಂದೆ, ತಾತ, ಮುತ್ತಾತನವರೆಗೆ ತಮ್ಮ ಪರಂಪರೆಯ ಹೆಸರನ್ನು ನೆನಪಲ್ಲಿಟ್ಟುಕೊಳ್ಳುತ್ತಾರೆ. ಈ ಮಠದ ಪರಂಪರೆಯಲ್ಲಿ ಇದುವರೆವಿಗೂ ಸುಮಾರು ಹತ್ತಾರು ಗುರುಗಳನ್ನು ಕಾಣುತ್ತೇವೆ. ಎಲ್ಲರೂ ಆಯಾ ಕಾಲಘಟ್ಟದಲ್ಲಿ ಸಮಾಜಸೇವೆ ಮಾಡಿಕೊಂಡು ಬಂದಿದ್ದಾರೆ. ಅದರಲ್ಲಿ ನಮ್ಮ ಹಿರಿಯ ಶ್ರೀ ಚನ್ನವೀರ ಶಿವಯೋಗಿಗಳು ಬಹು ಪ್ರಮುಖರಾಗಿದ್ದಾರೆ. ಮಠದ ಸಾಮಾಜಿಕ ಸೇವೆಗೆ ಭಕ್ತರ ಸಹಕಾರವಿದ್ದರೆ ಇನ್ನೂ ಹೆಚ್ಚಿನ ಸೇವೆಯನ್ನು ಮಾಡಿಕೊಂಡು ಹೋಗಬಹುದು. ನಿಮ್ಮೆಲ್ಲರ ಸಹಕಾರ ನಿರಂತರವಾಗಿ ಇದ್ದಾಗ ಇಂತಹ ಕಾರ್ಯಕ್ರಮಗಳು ಸಾರ್ಥಕವಾಗುತ್ತವೆ ಎಂದು ಹೇಳಿದರು.
ಮಠದ ವತಿಯಿಂದ ನಡೆಯುವ ಪ್ರೌಢಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಯಲಗಚ್ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು. ಕಳೆದ ವರ್ಷ ನೂರರಷ್ಟು ಫಲಿತಾಂಶ ಪಡೆದದ್ದಕ್ಕಾಗಿ ಶಿಕ್ಷಕರನ್ನು ಗೌರವಿಸಲಾಯಿತು. ಗ್ರಾಮದಲ್ಲಿ ಗುರುಗಳ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಹೋತನಳ್ಳಿಯ ಶ್ರೀ ಶಂಭುಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು. ಜಡೆ ಸ್ಥಾನ ಮಠದ ಶ್ರೀ ರುದ್ರದೇವರು, ಬೈಲಹೊಂಗಲದ ಶ್ರೀ ದೇವರು, ತಿಳವಳ್ಳಿಯ ಶ್ರೀ ಗಳು ಮಾತನಾಡಿದರು. ಕಡೆನಂದಿಹಳ್ಳಿಯ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಕ್ಯಾಸನೂರಿನ ವಿಜಯಕುಮಾರ ಶ್ರೀಗಳು ಇದ್ದರು.