

ಹುಬ್ಬಳ್ಳಿ : ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ನಕಲಿ ಗಾಂಧಿಗಳ ಪಾದ ನೆಕ್ಕಿದವರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಪ್ರಲ್ಹಾದ ಜೋಶಿ ಇವತ್ತಿಗೂ ಗೋಡ್ಸೆ ಪೂಜೆ ಮಾಡುತ್ತಾರೆ‘ ಎಂಬ ಹರಿಪ್ರಸಾದ್ ಹೇಳಿಕೆಗೆ ತಿರುಗೇಟು ನೀಡಿದರು.
ಈಗಿನ ಕಾಂಗ್ರೆಸ್ನಲ್ಲಿ ಇರುವವರೆಲ್ಲ ನಕಲಿ ಗಾಂಧಿಗಳು. ಇಂಥ ನಕಲಿ ಗಾಂಧಿಗಳ ಪಾದ ನೆಕ್ಕುವ ಹರಿಪ್ರಸಾದ್, ನಮ್ಮ ಬಗ್ಗೆ ಹೇಳೋದೇನು ಎಂದು ತರಾಟೆ ತೆಗೆದುಕೊಂಡರು.
ಹರಿಪ್ರಸಾದ್ ಮೊದಲು ತಮ್ಮ ಯೋಗ್ಯತೆಯನ್ನು ಅರಿಯಲಿ. ಹಿಂದೆ ಸಿಎಂ ಸಿದ್ದರಾಮಯ್ಯ ಅವರ ಚಡ್ಡಿ ನಿಕ್ಕರ್ ಬಗ್ಗೆ ಮಾತನಾಡಿದ್ದರು. ಆಗಲೇ ಸಿಎಂ ಇವರನ್ನು ಹೊರ ಹಾಕಲು ತಯಾರಾಗಿದ್ದರು ಎಂದು ದೂರಿದರು.
ಸಿದ್ದರಾಮಯ್ಯ ನಿಕ್ಕರ್ ಹಾಕಲ್ಲ ಎಂದೆಲ್ಲ ಹೇಳಿದಂಥ ಈ ವ್ಯಕ್ತಿ, ಇದೀಗ ಸಿಎಂ ಪರ ಧ್ವನಿ ಎತ್ತುತ್ತಿದ್ದಾರೆ. ಬಹುಶಃ ಸಿಎಂ ನಾಲ್ವರು ಸಚಿವರನ್ನು ಸಂಪುಟದಿಂದ ತೆಗೆದು ಹಾಕಿ ಹರಿಪ್ರಸಾದ್ ಗೆ ಸಚಿವ ಸ್ಥಾನ ಕೊಡುವುದಾಗಿ ಹೇಳಿರಬೇಕು ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ನಾಯಕರು ಹೀಗೆಲ್ಲ ಮಾತನಾಡುತ್ತಲೇ ದೇಶದಲ್ಲಿ ತಿರಸ್ಕೃತಗೊಳ್ಳುತ್ತಿದ್ದಾರೆ. ಬಿ.ಕೆ. ಹರಿಪ್ರಸಾದ್ ಮೊದಲು ದೇಶದಲ್ಲಿ ತಮ್ಮ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ನೋಡಿಕೊಳ್ಳಲಿ ಎಂದು ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.
ಬಿಜೆಪಿ ಯಾವತ್ತೂ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಬಾಯಿ್ ಪಟೇಲ್ ಅವರಂಥ ಮಹಾನ್ ನಾಯಕರನ್ನು ಅತ್ಯಂತ ಗೌರವದಿಂದಲೇ ಕಾಣುತ್ತಿದೆ. ಎಲ್ಲರಿಗೂ ಸಮಾನ ಗೌರವವನ್ನೇ ಕೊಡುತ್ತಿದೆ. ಬಿಜೆಪಿ ಅಸಲಿ ಗಾಂಧಿಗಳಿಗೆ, ಗಾಂಧಿವಾದಿಗಳಿಗೆ ಸದಾ ಗೌರವ ನೀಡುತ್ತದೆ. ನಕಲಿ ಗಾಂಧಿಗಳಿಗಲ್ಲ ಎಂದು ಹೇಳಿದರು.
ಮಹಾತ್ಮ ಗಾಂಧಿ ಅವರನ್ನು ಪ್ರಧಾನಿ ಮೋದಿ ಆದಿಯಾಗಿ ಬಿಜಿಪಿಯ ಪ್ರತಿಯೊಬ್ಬರೂ ಅತ್ಯಂತ ಗೌರವದಿಂದಲೇ ನೋಡುತ್ತಾರೆ. ಈ ಅಸಲಿ ಗಾಂಧಿಯವರ ಜೀವನಧಾರೆಗಳನ್ನು ಸ್ವತಃ ಮೋದಿ ಅವರೂ ಅನುಸರಿಸುತ್ತಿದ್ದಾರೆ ಎಂದರು ಪ್ರಲ್ಹಾದ ಜೋಶಿ.
ಅಂಬೇಡ್ಕರ್ ಗೆ ಕಾಂಗ್ರೆಸ್ ಏನು ಗೌರವ ಕೊಟ್ಟಿದೆ? ದಲಿತರ ನಾಯಕ, ಸಂವಿಧಾನ ಶಿಲ್ಪಿ, ಮಹಾನ್ ಗಾಂಧಿವಾದಿಯೂ ಆಗಿದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಏನು ಗೌರವ ಕೊಟ್ಟಿದೆ? ಭಾರತ ರತ್ನ ಸಹ ಕೊಡಲಿಲ್ಲ ಎಂದು ಟೀಕಿಸಿದರು