ಧರ್ಮದ ಸಾರ ಅರಿತವರು ಯಾವುದೇ ಧರ್ಮವನ್ನು ಟೀಕಿಸುವುದಿಲ್ಲ : ನಿರ್ಮಲಾನಂದನಾಥ ಸ್ವಾಮೀಜಿ

21 CRP 02 SRI NIRMALANANDANATHA SWAMIJI
ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ
Published on

ಮೈಸೂರು: ತಮಿಳುನಾಡು ಸಚಿವ ಉದಯನಿಧಿ ಮಾರನ್ ಸನಾತನ ಧರ್ಮದ ಕುರಿತು ಯಾವ ಉದ್ದೇಶದಿಂದ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವವರು ಶಬ್ದಗಳನ್ನು ಎಚ್ಚರಿಕೆಯಿಂದ ಬಳಸುವುದು ಉತ್ತಮ ಎಂದು ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಸನಾತನ ಎಂದರೆ ಆಂಗ್ಲಭಾಷೆಯಲ್ಲಿ ಏನ್ಸಿಯೆಂಟ್ ಎಂಬ ಅರ್ಥವಿದೆ. ಸನಾತನ ಎಂದರೆ ಹಿಂದೆ ಇತ್ತು, ಇಂದು ಇದೆ, ಮುಂದೆಯೂ ಇರುತ್ತದೆ ಎಂಬ ಅರ್ಥವನ್ನು ಸೂಚಿಸುತ್ತದೆ. ಪ್ರತಿಯೊಬ್ಬರಲ್ಲಿರುವ ಕತ್ತಲನ್ನು ನೀಗಿ ಬೆಳಕನ್ನು ನೀಡುವ ಹಾಗೂ ಕೊಳೆಯನ್ನು ತೊಳೆದು ಶುದ್ಧತೆಯನ್ನು ನೀಡುವುದೇ ಧರ್ಮ. ಹಾಗಾಗಿ ಸನಾತನ ಧರ್ಮವನ್ನು ಮೂಲೋತ್ಪಟನ ಮಾಡುವುದು ಎಂದರೆ ಐಸಿಯುನಲ್ಲಿರುವ ರೋಗಿಗೆ ಅಳವಡಿಸಿದ ಆಕ್ಸಿಜನ್ ತೆಗೆದ ಹಾಗೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ನಾಡಾಳುವ ದೊರೆ ನಾಸ್ತಿಕನಾದರೂ ಪ್ರಜೆಗಳ ಆಸ್ತಿಕತೆಯನ್ನು ಗೌರವಿಸಬೇಕು’ ಎಂದು ಬಹಳ ಹಿಂದೆಯೇ ಚಾಣಕ್ಯ ಹೇಳಿದರು. ಧರ್ಮದ ನಿಜವಾದ ಅರ್ಥ ತಿಳಿದುಕೊಂಡವರು ಯಾವ ಧರ್ಮದ ಬಗ್ಗೆಯೂ ಮಾತನಾಡಲು ಹೋಗುವುದಿಲ್ಲ. ಅದು ಯಾವುದೇ ಧರ್ಮವಾಗಿರಲಿ, ಅದರ ತಿರುಳನ್ನು ತಿಳಿದುಕೊಂಡರೆ ಮತ್ತೊಂದು ಧರ್ಮದ ಬಗ್ಗೆ ಮಾತನಾಡುವುದಿಲ್ಲ. ಧರ್ಮದ ಬಗ್ಗೆ ತಿಳಿಯದೆ ಇರುವವರು ತಾವು ಹುಟ್ಟಿದ ಧರ್ಮದ ಬಗ್ಗೆ ಮಾತನಾಡುತ್ತಾರೆ ಹಾಗೂ ಬೇರೆ ಧರ್ಮದ ಬಗ್ಗೆಯೂ ಮಾತನಾಡುತ್ತಾರೆ ಎಂದರು.

ನಮ್ಮ ದೇಶವನ್ನು ಭಾರತ ಹಾಗೂ ಇಂಡಿಯಾ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಆಂಗ್ಲಭಾಷೆಯಲ್ಲಿ ಇಂಡಿಯಾ, ಭಾರತೀಯ ಭಾಷೆಗಳಲ್ಲಿ ಭಾರತ ಎಂದು ಕರೆಯಲಾಗುತ್ತದೆ. ಕೇಂದ್ರ ಸರ್ಕಾರ ಸಹ ದೇಶದ ಹೆಸರು ಬದಲಾಣೆ ಮಾಡುವ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಾಗಿ ಆ ಕುರಿತು ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದರು ಹೇಳಿದರು.

ಮೇಕೆದಾಟು ಯೋಜನೆ ಜಾರಿಗೊಳಿಸಿದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. 2050 ರಲ್ಲಿ ಬೆಂಗಳೂರಿನ ಜನಸಂಖ್ಯೆ 5 ಕೋಟಿ ಆಗುವ ನಿರೀಕ್ಷೆ ಇದೆ. ಹಾಗಾಗಿ ಮೇಕೆದಾಟು ಯೋಜನೆ ಜಾರಿಯಾಗದೆ ಇದ್ದರೆ ಮುಂದೆ ಬೆಂಗಳೂರಿಗೆ ನೀರು ಒದಗಿಸುವುದು ಕಷ್ಟವಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net